ಚಿತ್ರದುರ್ಗ : ಭ್ರಷ್ಟ ಬಿಜೆಪಿ ಸರ್ಕಾರ ಬೀಳುವುದು ಒಳಿತು ಎಂಬ ಸಿದ್ದರಾಮಯ್ಯ ಮಾತಿಗೆ ಸಚಿವ ಶ್ರೀರಾಮುಲು ತಿರುಗೇಟು ನೀಡಿದ್ದು, ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ ಎಂದಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಗೊತ್ತಿಲ್ಲ, ಅವರ ಸರ್ಕಾರ ಕೆಡವಿದ್ದು ಅವರದ್ದೇ ಶಾಸಕರು. ಬಿಜೆಪಿ ಸರ್ಕಾರಕ್ಕೆ ಅಮಿತ್ ಶಾ, ಮೋದಿ, ನಡ್ಡಾರಂಥ ರಾಷ್ಟ್ರೀಯ ನಾಯಕರಿದ್ದಾರೆ. ಅವರೇನೆ ಪಲ್ಟಿ ಹೊಡೆದರೂ 3 ವರ್ಷಕಾಲ ನಮ್ಮದೇ ಸರ್ಕಾರ ಇರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ಸಿನವರಿಗೆ ಏನೂ ಕೆಲಸವಿಲ್ಲ, ಈ ರೀತಿ ಮಾತಾಡೋದು ಸಹಜ. ಇನ್ನೊಬ್ಬ ಮುಖ್ಯಮಂತ್ರಿ ಯಾರೂ ಇಲ್ಲ ಬಿಎಸ್ ವೈ ಸಮರ್ಥರಿದ್ದಾರೆ. ಬಿಜೆಪಿಯಲ್ಲಿ ಬೆಂಕಿ ಬಿದ್ದಾಗ ಕಾಂಗ್ರೆಸ್ ನವರು ಬರುವುದು ಬೇಕಿಲ್ಲ. ಬಿಜೆಪಿ ತತ್ವ ಸಿದ್ಧಾಂತದ ಮೂಲಕ ಬೆಳೆದ ಪಕ್ಷ. ಬೆಂಕಿ ಬಿದ್ದಂತ ವೇಳೆ ಶಾಸಕರು ಹಿರಿಯರು ಸೇರಿ ಆರಿಸುವ ಶಕ್ತಿಯಿದೆ ಎಂದು ಕಾಂಗ್ರೆಸ್ ನವರಿಗೆ ರಾಮುಲು ತಿರುಗೇಟು ನೀಡಿದರು.
ಇದೇ ವೇಳೆ ಸಾಮಾಜಿಕ ಅಂತರ ಇಲ್ಲದೇ ಮೆರವಣಿಗೆ ನಡೆಸಿದ ಬಗ್ಗೆ ಮಾತನಾಡಿದ ಅವರು, ನಾನು ಬಾಗಿನ ಅರ್ಪಿಸುವ ಕಾರ್ಯಕ್ರಮಕ್ಕೆ ಮಾತ್ರ ಸೂಚಿಸಿದ್ದೆನು. ಕಾರ್ಯಕರ್ತರು ಎಲ್ಲರೂ ಸೇರಿ ಈ ಕಾರ್ಯಕ್ರಮ ನಡೆಸಿದ್ದಾರೆ. ಸಾಮಾಜಿಕ ಅಂತರ ಕಾಯುವಂತೆ ನಾವೇ ಗೈಡ್ ಲೈನ್ ಪಾಸ್ ಮಾಡಿದ್ದೇವೆ. ಸರ್ಕಾರದ ಗೈಡ್ ಲೈನ್ ನಂತೆ ನಡೆದುಕೊಳ್ಳಲು ಜನರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದರು.








