ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸರಕಾರ ಬೃಹತ್ ಮಿಲಿಟರಿ ಶಾಲೆ: ಸಿಎಂ ಬೊಮ್ಮಾಯಿ
Saakaha Tv
ಬೆಂಗಳೂರು: ಸಂಗೊಳ್ಳಿ ರಾಯಣ್ಣನ ಹೆಸರಿನಲ್ಲಿ ಸರಕಾರ ಬೃಹತ್ ಮಿಲಿಟರಿ ಶಾಲೆಯನ್ನು ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ 191 ನೇ ಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಮಾಡಿದ ನಂತರ ಮಾತನಾಡಿದ ಅವರು, ಈ ಶಾಲೆಯನ್ನು ನಿರ್ಮಿಸಲು ಸರಕಾರ 180 ಕೋಟಿ ರೂ ವೆಚ್ಚ ಮಾಡಲಾಗಿದೆ. ಈಗಾಗಲೇ 55 ಕೋಟಿ ರೂ.ಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ರಕ್ಷಣಾ ಇಲಾಖೆ ಶಾಲೆಯ ಉಸ್ತುವಾರಿಯನ್ನು ವಹಿಸಿಕೊಳ್ಳಲು ಮಾತುಕತೆ ನಡೆದಿದೆ ಎಂದರು.
ಹಾಗೇ ಪರಿಶೀಲನಾ ಕಾರ್ಯವೂ ನಡೆದಿದ್ದು, ರಕ್ಷಣಾ ಇಲಾಖೆ ಅದನ್ನು ಬಹುತೇಕವಾಗಿ ಮಿಲಿಟರಿ ಶಾಲೆಯಾಗಿ ಪರಿವರ್ತನೆ ಮಾಡಲಿದೆ. ಹಾಸ್ಟೆಲ್ ವ್ಯವಸ್ಥೆ ಸೇರಿದಂತೆ ಅಗತ್ಯ ವ್ಯವಸ್ಥೆಗಳನ್ನು 100 ಎಕರೆ ಪ್ರದೇಶದಲ್ಲಿ ಮಾಡಲಾಗುತ್ತಿದೆ. ಇದೇ ವರ್ಷ ಶಾಲೆಯ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ರಾಯಣ್ಣ ಹುತಾತ್ಮರಾದ ನಂದಗಡದಲ್ಲಿ ಅವರ ಸಮಾಧಿಯ ಅಭಿವೃದ್ಧಿ ಕಾರ್ಯವನ್ನು ಕೈಗೊಳ್ಳಲಾಗುವುದು. ಅವರ ಹುಟ್ಟೂರು ಸಂಗೊಳ್ಳಿಯಲ್ಲಿ 10 ಎಕರೆ ಜಮೀನು ರಾಕ್ ಗಾರ್ಡನ್ ನಿರ್ಮಾಣಕ್ಕೆ ಮಂಜೂರು ಮಾಡಲಾಗಿದೆ. ಮುಂದಿನ ಪೀಳಿಗೆಗೆ ರಾಯಣ್ಣನ ಜೀವನದ ಪರಿಚಯ ಮಾಡಿಕೊಡಲು ಈ ಸ್ಮಾರಕಗಳ ನಿರ್ಮಾಣವಾಗುತ್ತಿದೆ ಎಂದರು.