ಮುಂಬೈ, ಮೇ 31 : ಲಾಕ್ ಡೌನ್ ನಿಂದ ಸಿಲುಕಿ ಹಾಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಸುರಕ್ಷಿತವಾಗಿ ತಲುಪಿಸಿ ಬಾಲಿವುಡ್ ನಟ ಸೋನು ಸೂದ್ ನಿಜ ಜೀವನದಲ್ಲೂ ಹೀರೋ ಎಂದು ತೋರಿಸಿಕೊಟ್ಟಿದ್ದಾರೆ. ಅವರ ಕಾರ್ಯಕ್ಕೆ ರಾಷ್ಟ್ರದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ಇದೀಗ ಮಹಾರಾಷ್ಟ್ರದ ರಾಜ್ಯಪಾಲರು ಸಹ ಅವರನ್ನು ಅಭಿನಂದಿಸಿದ್ದಾರೆ.
ಮಹಾರಾಷ್ಟ್ರ ರಾಜ್ಯಪಾಲ ಅವರು ಸೋನು ಸೂದ್ ಅವರ ಕಾರ್ಯಗಳನ್ನು ಮೆಚ್ಚಿ ರಾಜ ಭವನಕ್ಕೆ ಅವರನ್ನು ಆಹ್ವಾನಿಸಿದ್ದರು.
ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಈ ಬಗ್ಗೆ ತಮ್ಮ ಟ್ವಿಟರ್ ಖಾತೆಯಲ್ಲಿ ‘ಮುಂಬೈನ ರಾಜ್ ಭವನದಲ್ಲಿ ನಟ ಸೋನು ಸೂದ್ ಇಂದು ಭೇಟಿಯಾದರು. ಶ್ರೀ ಸೋನು ಸೂದ್, ವಲಸೆ ಕಾರ್ಮಿಕರನ್ನು ಅವರವರ ರಾಜ್ಯಗಳಿಗೆ ತಲುಪಿಸಲು ಕೈಗೊಂಡಿರುವ ಕ್ರಮಗಳನ್ನು ಮತ್ತು ಅವರಿಗೆ ಆಹಾರವನ್ನು ಒದಗಿಸಲು ಸಹಾಯ ಮಾಡುತ್ತಿರುವ ತಮ್ಮ ಕಾರ್ಯಗಳ ಬಗ್ಗೆ ವಿವರಿಸಿದರು. ಅವರ ಮಹತ್ಕಾರ್ಯವನ್ನು ಶ್ಲಾಘಿಸಿ, ಈ ಪ್ರಯತ್ನಗಳಿಗೆ ಸಂಪೂರ್ಣ ಬೆಂಬಲವನ್ನು ಭರವಸೆ ನೀಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಸೋನು ಸೂದ್ ಕೇವಲ ಮಹಾರಾಷ್ಟ್ರ ಮಾತ್ರವಲ್ಲ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿ ಹಾಕಿಕೊಂಡಿರುವ ಕಾರ್ಮಿಕರನ್ನು ಅವರವರ ಊರಿಗೆ ತಲುಪಿಸಲು ಶ್ರಮಿಸುತ್ತಿದ್ದು, ಬಸ್ ವ್ಯವಸ್ಥೆ ಕಲ್ಪಿಸುವ ಮೂಲಕ ಈಗಾಗಲೇ 2000 ಕ್ಕೂ ಹೆಚ್ಚು ಕಾರ್ಮಿಕರನ್ನು ಸುರಕ್ಷಿತವಾಗಿ ಅವರ ಊರಿಗೆ ಕಳುಹಿಸಿದ್ದಾರೆ. ಇತ್ತೀಚೆಗಷ್ಟೇ ಕಾರ್ಮಿಕ ಮಹಿಳೆಯೊಬ್ಬಳು ತನ್ನ ಮಗುವಿಗೆ ಸೋನು ಸೂದ್ ಶ್ರೀವಾಸ್ತವ್ ಎಂದು ಹೆಸರಿಟ್ಟು ಕೃತಜ್ಞತೆ ಸಲ್ಲಿಸಿದ್ದಳು.








