ತಿರುಪತಿ: ಮಹಾಮಾರಿ ಕೊರೊನಾ ಸೋಂಕು ಹರಡುವುದನ್ನು ತಡೆಯಲು ಮಾಡಿದ್ದ ಮೂರು ತಿಂಗಳ ಲಾಕ್‍ಡೌನ್ ಬಳಿಕ ಇಂದಿನಿಂದ ಹಿಂದೂ ಭಕ್ತರ ಆರಾಧ್ಯ ದೈವ ತಿರುಪತಿ ವೆಂಕಟೇಶ್ವರ ಸ್ವಾಮಿಯ ದರ್ಶನ ಆರಂಭವಾಗಿದೆ. ಇಂದು ಬೆಳಿಗ್ಗೆ 6.30ರಿಂದಲೇ ಏಡುಕುಂಡಲವಾಡನ ದರ್ಶನ ಆರಂಭವಾಗಿದ್ದು, ಭಕ್ತರ ಮೊಗದಲ್ಲಿ ಮಂದಹಾಸ ಕಂಡುಬರುತ್ತಿದೆ. ಬೆಳಿಗ್ಗೆ 6.30ರಿಂದ ಸಂಜೆ 7.30ರವರೆಗೆ ಮಾತ್ರ ತಿಮ್ಮಪ್ಪನ ದರ್ಶನ ನಡೆಯಲಿದೆ.
ಪ್ರತಿದಿನ 6 ಸಾವಿರ ಭಕ್ತರಿಗೆ ಮಾತ್ರ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅದರಲ್ಲೂ ಆನ್‍ಲೈನ್ ಮೂಲಕ ಟಿಕೆಟ್ ಪಡೆದವರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಒಂದು ಗಂಟೆ ಅವಧಿಯಲ್ಲಿ 500 ಭಕ್ತರು ತಿಮ್ಮಪ್ಪನ ದರ್ಶನ ಮಾಡಲು ಅವಕಾಶವಿದೆ. 3 ಮಂದಿಗೆ ಆನ್‍ಲೈನ್ ಟಿಕೆಟ್ ಕೊಟ್ಟರೆ, ತಿರುಪತಿಯ ಅಲಿಪಿರಿ ಕೌಂಟರ್‍ನಲ್ಲಿ ಉಳಿದ 3 ಸಾವಿರ ಟಿಕೆಟ್‍ಗಳನ್ನು ಪ್ರತಿದಿನ ನೀಡಲಾಗುತ್ತಿದೆ.
ಕಳೆದ ಸೋಮವಾರದಿಂದ ದೇಶಾದ್ಯಂತ ದೇವಾಲಯಗಳನ್ನು ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿತ್ತು. ಆದರೆ, ನಾಲ್ಕು ಬಳಿಕ ಆಂಧ್ರಪ್ರದೇಶ ಸರ್ಕಾರ ತಿರುಮಲದಲ್ಲಿ ಶ್ರೀವೆಂಕಟೇಶ್ವರನ ದರ್ಶನಕ್ಕೆ ಅನುಮತಿ ನೀಡಿದೆ. ಕೇಂದ್ರ ಸರ್ಕಾರ ನೀಡಿದ ಮಾರ್ಗಸೂಚಿಯಂತೆ 65 ವರ್ಷ ಮೇಲ್ಪಟ್ಟವರು ಹಾಗೂ 10 ವರ್ಷದೊಳಗಿನ ಮಕ್ಕಳಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಇಲ್ಲ ಎಂದು ಆಂಧ್ರಪ್ರದೇಶ ಸರ್ಕಾರ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಜೊತೆಗೆ ಬೇರೆ ರಾಜ್ಯಗಳಿಂದ ಬರುವ ಭಕ್ತರಿಗೂ ಸದ್ಯ ಅವಕಾಶ ನೀಡಿಲ್ಲ. ಒಂದು ವೇಳೆ ಆಂಧ್ರಪ್ರದೇಶಕ್ಕೆ ಹೋಗಬೇಕಾದರೆ ಇ-ಪಾಸ್ ಇರಲೇಬೇಕು. ಅತಿಹೆಚ್ಚು ಕೋವಿಡ್-19 ಪ್ರಕರಣಗಳನ್ನು ಹೊಂದಿರುವ ಮಹಾರಾಷ್ಟ್ರ, ದೆಹಲಿ, ತಮಿಳುನಾಡು, ರಾಜಸ್ಥಾನ, ಮಧ್ಯಪ್ರದೇಶ, ಗುಜರಾತ್‍ನಿಂದ ಬರುವವರು 7 ದಿನಗಳ ಸಾಂಸ್ಥಿಕ ಹಾಗೂ ಮತ್ತೆ 7 ದಿನ ಹೋಮ್ ಕ್ವಾರಂಟೈನ್‍ಗೆ ಒಳಗಾಗುವುದು ಕಡ್ಡಾಯ ಮಾಡಲಾಗಿದೆ.
ತಿಮ್ಮಪ್ಪನ ದರ್ಶನಕ್ಕೆ ಇರುವ ಷರತ್ತುಗಳು
1. ತಿರುಪತಿಯಲ್ಲಿ ಒಂದು ದಿನಕ್ಕೆ 6 ಸಾವಿರ ಮಂದಿಗೆ ಮಾತ್ರ ತಿಮ್ಮಪ್ಪನ ದರ್ಶನಕ್ಕೆ ಅವಕಾಶ
2. 65 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳಿಗೆ ಪ್ರವೇಶ ಇಲ್ಲ
3. ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಮಾಸ್ಕ್ ಇಲ್ಲದವರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಇಲ್ಲ.
4. ತಿರುಪತಿಯ ಅಲಿಪಿರಿಯಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಒಳಪಡಿಸಲಾಗುತ್ತದೆ.
5. ದರ್ಶನಕ್ಕೆ ಬರುವ ಭಕ್ತರ ವಾಹನಗಳನ್ನು ಅಲಿಪಿರಿ ಚೆಕ್‍ಪೋಸ್ಟ್‍ನಲ್ಲೇ ಸ್ಯಾನಿಟೈಸ್ ಮಾಡಲಾಗುತ್ತದೆ.
6. ಕಂಟೇನ್‍ಮೆಂಟ್ ಝೋನ್‍ನ ಭಕ್ತರಿಗೆ ತಿಮ್ಮಪ್ಪನ ದರ್ಶನ ಭಾಗ್ಯ ಇಲ್ಲ.
7. ಪ್ರತಿದಿನ ಬೆಳಿಗ್ಗೆ 6.30ರಿಂದ ಸಂಜೆ 7.30ರವರೆಗೆ ದರ್ಶನ, ಗಣ್ಯರಿಗೆ ಕೇವಲ ಒಂದು ಗಂಟೆ ಅಂದರೆ, ಬೆಳಿಗ್ಗೆ 6.30ರಿಂದ 7.30ರವರೆ ಅವಕಾಶ ನೀಡಲಾಗಿದೆ.
8. ತಿಮ್ಮಪ್ಪನ ದರ್ಶನ ಪಡೆಯುವ ಭಕ್ತರಿಗೆ ತೀರ್ಥ ವಿತರಣೆ ಇಲ್ಲ.
9. ಭಕ್ತರು ಹುಂಡಿಯಲ್ಲಿ ಹಣ ಅಥವಾ ಹರಕೆ ವಸ್ತುಗಳನ್ನು ಹಾಕುವ ಮೊದಲು ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.
10. ದೇವಾಲಯ ಪ್ರದೇಶಿಸುವ ಮುನ್ನ ಭಕ್ತರು ಕಡ್ಡಾಯವಾಗು ಸೋಪಿನಿಂದ ಕೈ ಹಾಗೂ ಕಾಲುಗಳನ್ನು ತೊಳೆದುಕೊಳ್ಳಬೇಕು.
11. ದರ್ಶನಕ್ಕೆ ತೆರಳುವ ವೇಳೆ ಗೋಡೆ ಮೇಲಿನ ಮೂರ್ತಿಗಳನ್ನು ಮುಟ್ಟುವಂತಿಲ್ಲ.
12. ಪ್ರಸಾದವನ್ನು ದೇವಾಲಯದ ಒಳಗಿನ ಕೌಂಟರ್‍ಗಳಲ್ಲಿ ಮಾತ್ರ ವಿತರಣೆ ಮಾಡಲಾಗುತ್ತದೆ. ಆಂಧ್ರದ ನಿವಾಸಿಗಳು ಆನ್‍ಲೈನ್ ಹಾಗೂ ಟಿಟಿಡಿ ಕೌಂಟರ್‍ಗಳಲ್ಲಿ ಲಡ್ಡು ಪಡೆಯಬಹುದು.
13. ಅನ್ನದಾಸೋಹ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಗುಂಪು ಸೇರುವುದಕ್ಕೆ ಅವಕಾಶ ಇಲ್ಲ.