ಬೆಂಗಳೂರು : ಕೊರೋನಾ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೊರೊನಾ ಚಿಕಿತ್ಸೆ ನೆಪದಲ್ಲಿ ಖಾಸಗಿ ಆಸ್ಪತ್ರೆಗಳು ಲೂಟಿ ಹೊಡೆಯುತ್ತಿದೆ.
ಹೀಗಿದ್ದರೂ ಸರ್ಕಾರ, ಆರೋಗ್ಯ ಇಲಾಖೆ ಏನು ಮಾಡುತ್ತಿದೆ ಎಂದು ಆಡಳಿತ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ.
ನಿನ್ನೆ ಕೊರೊನಾ ಸೋಂಕಿನಿಂದ ಮೃತಪಟ್ಟ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರಿಗೆ ವಿಧಾಸಸಭೆಯಲ್ಲಿ ಸಂತಾಪ ಸೂಚಿಸಲಾಯಿತು. ಈ ವೇಳೆ ಮಾತನಾಡಿದ ಯತ್ನಾಳ್, ಸುರೇಶ್ ಅಂಗಡಿ ನಿಧನದಿಂದ ಆಘಾತಗೊಂಡಿದ್ದೇನೆ.
ಏಮ್ಸ್ ನಂತಹ ದೊಡ್ಡ ಸಂಸ್ಥೆಯಲ್ಲಿಯೇ ಅವರ ಜೀವ ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರೆ ನಾವು ಕೋವಿಡ್ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾಗಿದೆ.
ವಾರಕ್ಕೆ ಎರಡು ಬಾರಿ ಲಾಕ್ ಡೌನ್ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದರು.
ನನಗೆ ಕೊರೊನಾ ಬಂದಾಗ ಖಾಸಗಿ ಆಸ್ಪತ್ರೆಯೊಂದು 3.80 ಲಕ್ಷ ಮೂರು ದಿನಕ್ಕೆ ಬಿಲ್ ಮಾಡಿದೆ.
ಶಾಸಕರಾದ ನನಗೇ ಇಷ್ಟು ಬಿಲ್ ಮಾಡಿದ್ದರೆ ಜನಸಾಮಾನ್ಯರ ಪಾಡೇನು ಎಂದು ಯತ್ನಾಳ್, ಖಾಸಗಿ ಆಸ್ಪತ್ರೆಗಳು ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿವೆ.
ಸರ್ಕಾರ ಏನು ಮಾಡುತ್ತಿದೆ..? ಇಂತಹ ಆಸ್ಪತ್ರೆಗಳ ಮೇಲೆ ಸರ್ಕಾರಕ್ಕೆ ಯಾವ ನಿಯಂತ್ರಣವಿದೆ? ಎಂದು ಪ್ರಶ್ನಿಸಿದರು.