ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು, ರಾಜ್ಯದಲ್ಲಿ ಸಂಭವಿಸಿರುವ ಬಾಣಂತಿಯರ ಸರಣಿ ಸಾವು ಪ್ರಕರಣದ ಬಗ್ಗೆ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಲು ನಾವು ಸಿದ್ಧರಿದ್ದೇವೆ ಎಂದರು .ಈ ಘಟನೆಯ ಸಂಬಂಧದ ಈ ಹಿಂದಿನ ಮತ್ತು ಪ್ರಸ್ತುತ ನಡೆದ ಕೆಲವು ಪ್ರಮುಖ ವಿಚಾರಗಳು ಈ ರೀತಿಯಾಗಿದೆ.
ವಿಧಾನಸಭೆ ಚರ್ಚೆ: ವಿಧಾನಸಭೆಯಲ್ಲಿ ನಡೆದ ಚರ್ಚೆಯಲ್ಲಿ, ವಿಪಕ್ಷಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ, ತನಿಖೆಯಲ್ಲಿ ತಪ್ಪಿತಸ್ಥ ಎಂದು ತಿಳಿದು ಬಂದರೆ ಕ್ರಮ ಎದುರಿಸಲು ಸಿದ್ಧ ಎಂದು ಹೇಳಿದರು.
ಬಳ್ಳಾರಿ ಆಸ್ಪತ್ರೆ ಘಟನೆ: ನವೆಂಬರ್ 9, 10, 11ರಂದು ಬಳ್ಳಾರಿ ಆಸ್ಪತ್ರೆಯಲ್ಲಿ 34 ಸಿಸೇರಿಯನ್ ಹೆರಿಗೆ ಮಾಡಲಾಗಿತ್ತು. ಹೆರಿಗೆ ಬಳಿಕ ಅಸ್ವಸ್ಥಗೊಂಡ 7 ಮಂದಿಯಲ್ಲಿ 5 ಬಾಣಂತಿಯರು ಸಾವಿಗೀಡಾದರು.
ತಕ್ಷಣದ ಕ್ರಮ: ಸಾವಿನ ಕಾರಣ ತಿಳಿಯಲು ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿ.ವಿ.ಯ ವೈದ್ಯರ ತಂಡವನ್ನು ಬಳ್ಳಾರಿಗೆ ಕಳುಹಿಸಲಾಯಿತು.
ತಂಡದ ವರದಿ: ನವೆಂಬರ್ 12, 13ರಂದು ಅಧ್ಯಯನ ನಡೆಸಿದ ತಂಡ, ನವೆಂಬರ್ 14ರಂದು ವರದಿ ನೀಡಿದ್ದು, ಶಸ್ತ್ರಚಿಕಿತ್ಸೆಯ ಶಿಷ್ಟಾಚಾರ ಪಾಲನೆಯಾಗಿದ್ದು, ಸಿಸೇರಿಯನ್ ನಂತರ ನೀಡಿದ ರಿಂಗರ್ ಲ್ಯಾಕ್ಟೇಟ್ ಐವಿ ದ್ರಾವಣದ ಪ್ರತಿಕೂಲ ಪರಿಣಾಮದಿಂದ ಸಾವು ಸಂಭವಿಸಿದೆ ಎಂದು ತಿಳಿಸಿದೆ.