ಕೊಪ್ಪಳ: ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಗ್ರಾಮ ಪಂಚಾಯಿತಿ ಚುನಾವಣೆ ಅಭ್ಯರ್ಥಿ ಹಾಗೂ ಅವರ ಬೆಂಬಲಿಗರು ಕೊಪ್ಪಳ ಜಿಲ್ಲೆ ಕುಷ್ಟಗಿ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ವಿಜಯೋತ್ಸವ ಆಚರಿಸಿದ ಘಟನೆ ನಡೆದಿದೆ.
ತಾಲೂಕಿನ 36 ಗ್ರಾಮ ಪಂಚಾಯಿತಿಗಳ ಚುನಾವಣೆ ಮತ ಏಣಿಕೆ ಪ್ರಕ್ರಿಯೆ ಕುಷ್ಟಗಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಬುಧವಾರ ನಡೆದಿತ್ತು. ಅಭ್ಯರ್ಥಿಗಳ ಸೋಲು ಗೆಲುವಿನ ಫಲಿತಾಂಶ ಹೊರ ಬೀಳುತ್ತಿದ್ದಂತೆ ಗೆದ್ದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಪರಸ್ಪರ ಬಣ್ಣ ಎರಚಿ ಸಿಹಿ ತಿನಿಸುತ್ತಾ ಕೇಕೆ ಹಾಕುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೋಟರ್ ಬೈಕ್ ಮೂಲಕ ಸಂಚರಿಸುತ್ತಿರುವುದು ಸಾಮಾನ್ಯವಾಗಿತ್ತು.
ಆದರೆ, ಸಂಜೆ ಕಳೆದರೂ ಎಣಿಕೆ ಪ್ರಕ್ರಿಯೆ ಮುಂದುವರೆದಿತ್ತು. ಜತೆಗೆ ಒಂದೊಂದಾಗಿ ಅಭ್ಯರ್ಥಿಗಳ ಫಲಿತಾಂಶ ಹೊರಬಿದ್ದ ಬಳಿಕ ಬೆಂಬಲಿಗರು ಪ್ರಮುಖ ಬೀದಿ ವೃತ್ತಗಳಲ್ಲಿ ಸಮಾವೇಶಗೊಂಡು ಅಭ್ಯರ್ಥಿ ಪರ ಘೋಷಣೆ ಹಾಗೂ ಕೇಕೆ ಹಾಕುವುದು ನಡೆಯಿತು.
ಈ ನಡುವೆ ಚುನಾವಣೆಗೆ ಸ್ಪರ್ಧಿಸಿದ್ದ ಕೆಲ ಅಭ್ಯರ್ಥಿಗಳು ಅನಾರೋಗ್ಯ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಆಗಮಿಸಿದ್ದರು. ಫಲಿತಾಂಶ ತಿಳಿದ ಅವರ ಬೆಂಬಲಿಗರು ಆಸ್ಪತ್ರೆ ಆವರಣಕ್ಕೆ ನೂರಾರು ಸಂಖ್ಯೆಯಲ್ಲಿ ನುಗ್ಗಿ ಚಿಕಿತ್ಸೆಗೆ ದಾಖಲಾದ ಅಭ್ಯರ್ಥಿಗಳೊಂದಿಗೆ ಕೇಕೆ ಹಾಕುತ್ತಾ ಪರಸ್ಪರ ಬಣ್ಣ ಎರಚಿ ವಿಜಯೋತ್ಸವ ಆಚರಿಸಿದರು.
ವಿಜಯೋತ್ಸವ ಆಚರಣೆ ವೇಳೆ ಆಸ್ಪತ್ರೆಯ ಒಳ ರೋಗಿಗಳು ಶಬ್ಧ ಮಾಲಿನ್ಯ ಹಾಗೂ ಬಣ್ಣದ ಪೌಡರ್‍ನಿಂದ ತೊಂದರೆ ಅನುಭವಿಸುವಂತಾಯಿತು.
ಇದ್ಯಾವುದನ್ನೂ ಲೆಕ್ಕಿಸದ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ಜಿಲ್ಲಾಧಿಕಾರಿಗಳ ಆದೇಶ ಉಲ್ಲಂಘಿಸಿ ಕೊರೋನಾ ಮಾರ್ಗಸೂಚಿ ಅನ್ವಯ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೇ ವಿಜಯೋತ್ಸವ ಆಚರಿಸಿರುವುದಕ್ಕೆ ಸ್ಥಳೀಯ ಸಾರ್ವಜನಿಕರ ಹಾಗೂ ರೋಗಿಗಳ ಆಕ್ರೋಶಕ್ಕೆ ಕಾರಣವಾಯಿತು.
ಜತೆಗೆ ತುರ್ತು ಚಿಕಿತ್ಸೆಗಾಗಿ ಬರುವ ಆಂಬುಲೆನ್ಸ್ ಸಂಚಾರಕ್ಕೂ ಅಡೆತಡೆ ಉಂಟಾಗಿತ್ತು. ಬೆಳಿಗ್ಗೆಯಿಂದ ಸಂಜೆವರೆಗೆ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಆಸ್ಪತ್ರೆ ಆವರಣದಲ್ಲಿ ದೈಹಿಕ ಅಂತರ, ಮಾಸ್ಕ್ ಧರಿಸದೇ ಕೊರೋನಾ ಮಾರ್ಗ ಸೂಚಿಗಳನ್ನು ಪಾಲಿಸದೆ ಗುಂಪುಗೂಡಿ ಕೇಕೆಯೊಂದಿಗೆ ಪರಸ್ಪರ ಬಣ್ಣ ಎರಚುತ್ತಾ ವಿಜಯೋತ್ಸವ ಆಚರಿಸಿದರೂ ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಪೆÇಲೀಸ್ ಅಧಿಕಾರಿಗಳ ಗಮನಕ್ಕೆ ಬಾರದಿರುವುದು ಅಚ್ಚರಿ ತಂದಿದೆ. ಈ ಕುರಿತು ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನಿಸಿದರೆ ಎಲೆಕ್ಷನ್ ಐತಿ ಬಿಡ್ರಿ ಎಂಜಾಯ್ ಮಾಡ್ಲಿ ಎಂದು ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸಿದರು ಎಂದು ದೂರುತ್ತಾರೆ ಸ್ಥಳದಲ್ಲಿದ್ದ ಸಾರ್ವಜನಿಕರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel