Grammy Awards ಕಾರ್ಯಕ್ರಮದಲ್ಲಿ ಲತಾ ಜಿ ಕಡೆಗಣನೆ – ಲೋಕಲ್ ಅವಾರ್ಡ್ ಎಂದ ಕಂಗಾನ
ಸಂಗೀತ ಕ್ಷೇತ್ರದ, ವಿಶ್ವದ ಅತ್ಯಂತ ಪ್ರತಿಷ್ಠಿತ ‘ಗ್ರ್ಯಾಮಿ ಪ್ರಶಸ್ತಿ’ ಇತ್ತೀಚೆಗೆ ಲಾಸ್ ವೇಗಾಸ್‌ನಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಂಗೀತ ಲೋಕದ ಅನೇಕರನ್ನು ಸನ್ಮಾನಿಸಲಾಯಿತು. ಈ ಬಾರಿ ಇಬ್ಬರು ಭಾರತೀಯ ಸಂಗೀತಗಾರರಾದ ರಿಕ್ಕಿ ಕೇಜ್ ಮತ್ತು ಫಲ್ಗುಣಿ ಶಾ ಅವರು ಪ್ರಶಸ್ತಿಗೆ ಭಾಜನರಾದರು. ಆದರೆ ಸಮಾರಂಭದಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರಿಗೆ ಸಿಗಬೇಕಾಗಿದ್ದ ಗೌರವವನ್ನ ಸಲ್ಲಿಸಲಿಲ್ಲ. ಈ ಕಾರ್ಯಕ್ರಮದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಲು ಕಾರಣವಾಯಿತು. ಇದೇ ವೇಳೆ ಕಂಗನಾ ರಣಾವತ್ ಕೂಡ ಈ ಕುರಿತು ಕಿಡಿ ಕಾರಿದ್ದಾರೆ.
ಕಂಗನಾ ರಣಾವತ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲ ಈ ಕುರಿತು ಬರೆದುಕೊಂಡಿದ್ದಾರೆ. ಪಾಶ್ಚಿಮಾತ್ಯ ಪ್ರಶಸ್ತಿಯನ್ನು ಬಹಿಷ್ಕರಿಸುವ ಬಗ್ಗೆ ಕಂಗನಾ ಮಾತನಾಡಿದ್ದಾರೆ. “ಅಂತರರಾಷ್ಟ್ರೀಯ ಎಂದು ಹೇಳಿಕೊಳ್ಳುವ ಮತ್ತು ಹಿರಿಯ ಕಲಾವಿದರನ್ನು ಅವರ ಜಾತಿ ಅಥವಾ ಸಿದ್ಧಾಂತಗಳ ಕಾರಣದಿಂದ ನಿರ್ಲಕ್ಷಿಸುವ ಇಂಥಹ ಲೋಕಲ್ ಪ್ರಶಸ್ತಿಯ ವಿರುದ್ಧ ನಾವು ಬಲವಾದ ನಿಲುವು ತೆಗೆದುಕೊಳ್ಳಬೇಕು” ಎಂದು ಬರೆದಿದ್ದಾರೆ.
ಲತಾ ದೀದಿ ಅವರನ್ನ ‘ಉದ್ದೇಶಪೂರ್ವಕವಾಗಿ ಕಡೆಗಣಿಸಿದ್ದಾರೆ” ಎಂದಿರುವ ಅವರು ಆಸ್ಕರ್ ಮತ್ತು ಗ್ರ್ಯಾಮಿ ಎರಡೂ ಪ್ರಶಸ್ತಿಗಳು ಭಾರತ ರತ್ನ ಲತಾ ಮಂಗೇಶ್ಕರ್ ಅವರಿಗೆ ಗೌರವ ಸಲ್ಲಿಸಲು ವಿಫಲವಾಗಿವೆ. ಜಾಗತಿಕ ಪ್ರಶಸ್ತಿಗಳೆಂದು ಹೇಳಿಕೊಳ್ಳುವ ಈ ಪಕ್ಷಪಾತದ ಲೋಕಲ್ ಕಾರ್ಯಕ್ರಮಗಳನ್ನು ನಮ್ಮ ಮಾಧ್ಯಮಗಳು ಸಂಪೂರ್ಣವಾಗಿ ಬಹಿಷ್ಕರಿಸಬೇಕು ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಂಗನಾ ರಣಾವತ್ ಗಿಂತ ಮೊದಲು ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ‘ಗ್ರ್ಯಾಮಿ ಪ್ರಶಸ್ತಿ’ಗೆ ಛೀಮಾರಿ ಹಾಕಿದ್ದಾರೆ. ಗ್ರ್ಯಾಮಿ ಪ್ರಶಸ್ತಿಗೂ ಮೊದಲು ಆಸ್ಕರ್ 2022 ಪ್ರಶಸ್ತಿಗಳಲ್ಲಿ ‘ಇನ್ ಮೆಮೋರಿಯಮ್’ ವಿಭಾಗದಲ್ಲಿ ಭಾರತೀಯ ಗಾಯಕಿ ಲತಾ ಮಂಗೇಶ್ಕರ್ ಅವರ ಹೆಸರನ್ನು ಕೈಬಿಡಲಾಗಿತ್ತು. ಈ ಸಂದರ್ಭದಲ್ಲೂ ಭಾರತೀಯರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು.