ನವದೆಹಲಿ: ಹಲವರು ಕಡಿಮೆ ಬಡ್ಡಿ ಬಂದರೂ ಸರಿ ಬ್ಯಾಂಕ್ ನಲ್ಲಿಯೇ ಹಣವನ್ನು ಎಫ್ ಡಿ ಮಾಡಿರುತ್ತಾರೆ. ಸದ್ಯ ಅಂತಹ ಗ್ರಾಹಕರಿಗೆ ನಾಲ್ಕು ಬ್ಯಾಂಕ್ ಗಳು ಗುಡ್ ನ್ಯೂಸ್ ನೀಡಿವೆ.
ಆರ್ಬಿಐ ಸತತ ಐದು ಬಾರಿ ರೆಪೋ ದರವನ್ನು ಶೇ. 6.5ರಲ್ಲೇ ಉಳಿಸಿಕೊಂಡು ಬರುತ್ತಿದ್ದರೂ ಬ್ಯಾಂಕ್ ಗಳು ಠೇವಣಿ ದರ ಹೆಚ್ಚಿಸುವುದು ನಿಂತಿಲ್ಲ. ಬ್ಯಾಂಕ್ ಆಫ್ ಇಂಡಿಯಾ, ಡಿಸಿಬಿ ಬ್ಯಾಂಕ್, ಕೋಟಕ್ ಮಹೀಂದ್ರ ಬ್ಯಾಂಕ್ ಮತ್ತು ಫೆಡರಲ್ ಬ್ಯಾಂಕುಗಳು ಡೆಪಾಸಿಟ್ ದರಗಳನ್ನು ಹೆಚ್ಚಿಸಿ ಗ್ರಾಹಕರನ್ನು ಸೆಳೆಯುವ ಕೆಲಸ ಮಾಡುತ್ತಿವೆ.
ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಇಂಡಿಯಾ 46 ದಿನಗಳಿಂದ ಆರಂಭವಾಗಿ ಒಂದು ವರ್ಷದ ಅವಧಿಯ ವಿವಿಧ ಅವಧಿಗೆ ವಿವಿಧ ದರ ಪರಿಷ್ಕರಣೆ ಮಾಡಿದೆ. ಒಂದು ವರ್ಷದ ಠೇವಣಿಗೆ ಬಡ್ಡಿದರವನ್ನು ಶೇ. 7.25ಕ್ಕೆ ಹೆಚ್ಚಿಸಲಾಗಿದೆ. ಇವೆಲ್ಲವೂ 2 ಕೋಟಿ ರೂ.ಗಿಂತ ಮೇಲ್ಪಟ್ಟ ಠೇವಣಿಗಳಿಗೆ ಅನ್ವಯವಾಗುತ್ತದೆ.
ಕೋಟಕ್ ಮಹೀಂದ್ರ ಬ್ಯಾಂಕ್ ತನ್ನ ಮೂರರಿಂದ ಐದು ವರ್ಷ ಅವಧಿಯ ಠೇವಣಿ ಪ್ಲಾನ್ಗಳಿಗೆ ಬಡ್ಡಿ ದರ ಹೆಚ್ಚಿಸಿದೆ. 10ವರ್ಷ ಅವಧಿಯವರೆಗಿನ ಠೇವಣಿಗಳಿಗೆ ಈ ಬ್ಯಾಂಕ್ ಶೇ. 2.75ರಿಂದ ಶೇ. 7.25ರವರೆಗೆ ಬಡ್ಡಿ ನೀಡುತ್ತದೆ. ಡಿಸಿಬಿ ಬ್ಯಾಂಕ್ ಎರಡು ಕೋಟಿ ರೂ. ಒಳಗಿನ ಠೇವಣಿಗಳಿಗೆ ಶೇ. 8.60ರ ವರೆಗೆ ಬಡ್ಡಿ ನೀಡುತ್ತಿದೆ. ಗ್ರಾಹಕರ 2 ಕೋಟಿ ರೂ ಒಳಗಿನ ಠೇವಣಿಗಳಿಗೆ ಶೇ. 3.75ರಿಂದ ಶೇ. 8ರವರೆಗೆ ಬಡ್ಡಿ ಕೊಡುತ್ತದೆ. ಫೆಡರಲ್ ಬ್ಯಾಂಕ್ ಕೂಡ ಠೇವಣಿ ದರಗಳನ್ನು ಈ ತಿಂಗಳು ಪರಿಷ್ಕರಣೆ ಮಾಡಿದೆ. ಸಾಮಾನ್ಯ ಗ್ರಾಹಕರಿಗೆ ಶೇ. 7.50ರವರೆಗೆ ಬಡ್ಡಿ ಕೊಡುತ್ತದೆ.