ಸಿಡ್ನಿ : 2020ರ ಐಸಿಸಿ ಮಹಿಳಾ ಟಿ-20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಮಹಿಳಾ ಟಿ-20 ವಿಶ್ವಕಪ್ ಟೂರ್ನಿಯ ‘ಎ’ ಗ್ರೂಪಿನ ಮೊದಲ ಪಂದ್ಯದಲ್ಲೇ, ಭಾರತ ವನಿತೆಯರು ಗೆಲುವು ಸಾಧಿಸಿದ್ದಾರೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹರ್ಮನ್ ಪ್ರೀತ್ ಕೌರ್ ಪಡೆಗೆ ಆರಂಭಿಕರು ಡೀಸೆಂಟ್ ಸ್ಟಾರ್ಟ್ ನೀಡಿದ್ರು. ಸ್ಮೃತಿ ಮಂದಾನ 10 ರನ್ ಗಳಿಸಿ ಔಟಾದ್ರೆ, ಶಫಾಲಿ ವರ್ಮ 29 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ್ರು. ನಂತರ ನಾಯಕಿ ಹರ್ಮನ್ ಪ್ರೀತ್ ಕೌರ್ ಹೆಚ್ಚು ಕಾಲ ಕ್ರೀಸ್ ನಲ್ಲಿ ನಿಲ್ಲಲೇ ಇಲ್ಲ. ಜೆಮಿಮಾ ರೊಡ್ರಿಗಸ್ ಹೋರಾಟ 26 ರನ್ ಗಳಿಗೆ ಅಂತ್ಯವಾಯ್ತು. ಕೊನೆಗೆ ಏಕಾಂಗಿ ಹೋರಾಟ ನಡೆಸಿದ ದೀಪ್ತಿ ಶರ್ಮಾ 46 ಎಸೆತಗಳಲ್ಲಿ ಅಜೇಯ 49 ರನ್ ಗಳಿಸಿದ್ರು. ಅಂತಿಮವಾಗಿ ಭಾರತ 20 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 132ರನ್ ಗಳಿಸಿತು. ಆಸಿಸ್ ಪರ ಜೆಸ್ ಜೊನಾಸ್ಸೆನ್ 2 ವಿಕೆಟ್ ಪಡೆದರು.
ಇನ್ನು 133 ರನ್ ಗಳ ಗುರಿ ಬೆನ್ನಟ್ಟಿದ್ದ ಆಸಿಸ್ ಗೆ, ಆರಂಭದಲ್ಲೇ ಟೀಮ್ ಇಂಡಿಯಾ ವೇಗಿ ಶಿಖಾ ಪಾಂಡೆ ಆಘಾತ ನೀಡಿದ್ರು. ಬೆಥ್ ಮೂನಿ 6 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ್ರು. ನಂತರ ಲೆಗ್ ಸ್ಪಿನ್ನರ್ ಪೂನಂ ಯಾದವ್ ಸ್ಪಿನ್ ದಾಳಿಗೆ ತತ್ತರಿಸಿದ ಆಸ್ಟ್ರೇಲಿಯಾ, ಗೆಲ್ಲೋ ಪಂದ್ಯವನ್ನ ಕೈಚೆಲ್ಲಿಕೊಂಡಿತು. ಅಂತಿಮವಾಗಿ ಆಸ್ಟ್ರೇಲಿಯಾ 19.5 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲು ಅನುಭವಿಸಿತು. ಆ ಮೂಲಕ ಟೀಮ್ ಇಂಡಿಯಾ 17 ರನ್ ಗಳ ಗೆಲುವು ದಾಖಲಿಸಿತು.
ಟೀಮ್ ಇಂಡಿಯಾ ಪರ ಲೆಗ್ ಸ್ಪಿನ್ನರ್ ಪೂನಂ ಯಾದವ್, 4 ವಿಕೆಟ್, ಶಿಖಾ ಪಾಂಡೆ 3 ವಿಕೆಟ್, ರಾಜೇಶ್ವರಿ ಗಾಯಕ್ವಾಡ್ 1 ವಿಕೆಟ್ ಪಡೆದು ಮಿಂಚಿದ್ರು.








