ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಿಂದ ದಂಡ ವಸೂಲಿ ಮಾಡಲು ಕೇಂದ್ರಕ್ಕೆ ಸೂಚಿಸಿದ ಹಸಿರು ನ್ಯಾಯಮಂಡಳಿ
ಹೊಸದಿಲ್ಲಿ, ಸೆಪ್ಟೆಂಬರ್14: ಪರಿಸರ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಿಂದ ದಂಡವನ್ನು ವಸೂಲಿ ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ (ಸಿಪಿಸಿಬಿ) ನಿರ್ದೇಶನ ನೀಡಿದೆ.
ವಸ್ತುಗಳ ಪ್ಯಾಕಿಂಗ್‌ಗೆ ಮಿತಿಮೀರಿದ ಪ್ಲಾಸ್ಟಿಕ್ ಬಳಕೆ ಸೇರಿದಂತೆ ಇ-ಕಾಮರ್ಸ್ ಸಂಸ್ಥೆಗಳು ಶಾಸನಬದ್ಧ ರಕ್ಷಣಾ ಕ್ರಮಗಳನ್ನು ಉಲ್ಲಂಘಿಸಿರುವುದನ್ನು ಗಮನಿಸಿರುವ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ) ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಗೆ ದಂಡ ವಿಧಿಸುವಂತೆ ನಿರ್ದೇಶನ ನೀಡಿದೆ.
ಇ-ಕಾಮರ್ಸ್ ದೈತ್ಯ ಕಂಪೆನಿಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಗಳಿಗೆ ಪ್ಲಾಸ್ಟಿಕ್ ನಿರ್ಬಂಧ ಹೇರಬೇಕೆಂದು ಕೋರಿ 16 ವರ್ಷದ ಬಾಲಕ ಸುಪ್ರೀಂಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ಎನ್‌ಜಿಟಿ ಮುಖ್ಯಸ್ಥ ಎ.ಕೆ ಗೋಯೆಲ್ ಶನಿವಾರ ವಿಚಾರಣೆ ನಡೆಸಿದರು. ಈ ವೇಳೆ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಸೇರಿದಂತೆ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಉಲ್ಲಂಘಿಸಿದ ಇತರ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಪರಿಸರ ನಿಯಂತ್ರಣ ನಿಯಮ ಮೀರಿದ ಸಂಸ್ಥೆಗಳಿಗೆ ದಂಡ ವಿಧಿಸಬಹುದು. ಅಲ್ಲದೆ, ಆ ಸಂಸ್ಥೆಗಳ ವಿರುದ್ಧ ಕೈಗೊಳ್ಳಲಾಗಿರುವ ಕ್ರಮಗಳ ವರದಿಯನ್ನು ಅ.14ರ ಒಳಗಾಗಿ ಸಲ್ಲಿಸಬೇಕು ಎಂದು ಹೇಳಿದೆ.
ಸಂಬಂಧಪಟ್ಟ ಘಟಕಗಳ ವಿರುದ್ಧ ಪರಿಸರ ಲೆಕ್ಕಪರಿಶೋಧನೆಗೆ ಆದೇಶ ನೀಡುವುದನ್ನು ಸಿಪಿಸಿಬಿ ಪರಿಗಣಿಸಬಹುದು ಮತ್ತು ಕಾನೂನಿನ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿ ಪರಿಸರ ಮಾನದಂಡಗಳ ಉಲ್ಲಂಘನೆಗಾಗಿ ಪರಿಹಾರವನ್ನು ನಿರ್ಣಯಿಸಬಹುದು ಮತ್ತು ಮರುಪಡೆಯಬಹುದು ಎಂದು ನ್ಯಾಯಪೀಠ ಹೇಳಿದೆ.








