ಆ ದೇವರಿಗೇ ಗೊತ್ತು…! ಗ್ರೆಗ್ ಚಾಪೆಲ್ ಯಾಕೆ ಆ ರೀತಿ ಮಾಡಿದ್ರು ಅಂತ- ಹರ್ಭಜನ್ ಸಿಂಗ್
2007ರಲ್ಲಿ ನಡೆದಿದ್ದ ಕೆರೆಬಿಯನ್ ವಿಶ್ವಕಪ್ ನಲ್ಲಿ ಟೀಮ್ ಇಂಡಿಯಾ ಮೊದಲ ಸುತ್ತಿನಲ್ಲೇ ನಿರ್ಗಮಿಸಿತ್ತು. ಆಗ ತಂಡದ ತರಬೇತುದಾರನಾಗಿದ್ದ ಗ್ರೆಗ್ ಚಾಪೆಲ್ ಬಗ್ಗೆ ಇಡೀ ಟೀಮ್ ಇಂಡಿಯಾವೇ ಆಕ್ರೋಶ ವ್ಯಕ್ತಪಡಿಸಿತ್ತು. ಅಭಿಮಾನಿಗಳು ಟೀಮ್ ಇಂಡಿಯಾದ ವಿರುದ್ಧ ತಿರುಗಿಬಿದ್ದಿದ್ದರು. ಒಗ್ಗಟ್ಟಿನಿಂದ ಇದ್ದ ತಂಡವನ್ನು ಒಡಕಿನ ಮನೆಯಾಗಿಸಿದ್ದರು. ಗ್ರೆಗ್ ಚಾಪೆಲ್ ಅವರನ್ನು ಸಚಿನ್ ತೆಂಡುಲ್ಕರ್ ರಿಂಗ್ ಮಾಸ್ಟರ್ ಎಂದು ತನ್ನ ಪುಸ್ತಕದಲ್ಲಿ ಬರೆದುಕೊಂಡಿದ್ದರು.
ಇದೀಗ ಹರ್ಭಜನ್ ಸಿಂಗ್ ಸರದಿ. ಯಾಕಂದ್ರೆ ಹರ್ಭಜನ್ ಸಿಂಗ್ ಅವರಿಗೆ 2007ರ ವಿಶ್ವಕಪ್ ಟೂರ್ನಿಯ ಆಘಾತವನ್ನು ಮರೆಯೋಕೆ ಆಗುತ್ತಿಲ್ಲ. ತನ್ನ ಕ್ರಿಕೆಟ್ ಬದುಕಿನ ಅತ್ಯಂತ ಕಹಿ ಘಟನೆ ಅಂತ ಹೇಳಿದ್ದಾರೆ. ಅಲ್ಲದೆ ಆಗಿನ ಕೋಚ್ ಆಗಿದ್ದ ಗ್ರೆಗ್ ಚಾಪೆಲ್ ವಿರುದ್ಧ ಆಕ್ರೋಶ ಕೂಡ ವ್ಯಕ್ತಪಡಿಸಿದ್ದಾರೆ.
ಅದು ಗ್ರೆಗ್ ಚಾಪೆಲ್ ಕೋಚ್ ಆಗಿದ್ದ ಸಮಯ. ಟೀಮ್ ಇಂಡಿಯಾವನ್ನು ಗ್ರೆಗ್ ಚಾಪೆಲ್ ಛಿದ್ರ ಛಿದ್ರ ಮಾಡಿದ್ದರು. ಅವರ ಉದ್ದೇಶ ಏನು ಅಂತ ನನಗೆ ಗೊತ್ತಿಲ್ಲ. ಒಂದು ಒಳ್ಳೆಯ ತಂಡವನ್ನು ಹಾಳು ಮಾಡಿಬಿಟ್ಟಿದ್ದರು. ಯಾಕೆ ಆ ಥರ ಮಾಡಿದ್ರೂ ಎಂಬುದು ಆ ದೇವರಿಗೆ ಗೊತ್ತು. ಇಡೀ ಪ್ರೆಸ್ ಕೂಡ ಅವರು ಹೇಳಿದಂತೆ ಇತ್ತು. ಅವರಿಗೆ ಏನು ಬೇಕು ಅದೇ ರೀತಿ ಬರೆಸುತ್ತಿದ್ದರು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
2007ರ ಏಕದಿನ ವಿಶ್ವಕಪ್ ನನ್ನ ಕ್ರಿಕೆಟ್ ಬದುಕಿನ ಅತ್ಯಂತ ಕಹಿ ನೆನಪು. ನಾವು ಸರಿಯಾದ ದಿಕ್ಕಿನಲ್ಲಿ ಹೊಗುತ್ತಿಲ್ಲ ಎಂಬುದು ಭಾಸವಾಗುತ್ತಿತ್ತು. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿದ್ದೇವು. ಈ ಮನುಷ್ಯ ತಂಡವನ್ನು ವಿರುದ್ಧವಾದ ದಿಕ್ಕಿನಲ್ಲಿ ಮುನ್ನಡೆಸುತ್ತಿದ್ದಾನೆ ಎಂದು ನನಗೆ ಅನ್ನಿಸುತ್ತಿತ್ತು ಎಂದಿದ್ದಾರೆ ಭಜ್ಜಿ.
ಈ ಮನುಷ್ಯ ಟೀಮ್ ಇಂಡಿಯಾವನ್ನು ಹಾಳು ಮಾಡಲು ಬಂದಿದ್ದಾನೆ. ಗ್ರೆಗ್ ಚಾಪೆಲ್ ಯಾರು ? ಆತ ಯಾಕೆ ಈ ರೀತಿ ಮಾಡುತ್ತಿದ್ದಾನೆ ? ತಂಡವನ್ನು ವಿಭಜನೆ ಮಾಡಲು ಪ್ರಯತ್ನಿಸುತ್ತಿದ್ದ. ಆತ ಯಾಕೆ ಆ ರೀತಿ ಮಾಡುತ್ತಿದ್ದಾನೆ ಎಂದೆಲ್ಲಾ ಅನ್ನಿಸುತ್ತಿತ್ತು ಎಂದು ಹರ್ಭಜನ್ ಸಿಂಗ್ ಆ ಕೆಟ್ಟ ಘಳಿಗೆಗಳನ್ನು ನೆನಪು ಮಾಡಿಕೊಂಡಿದ್ದಾರೆ.
2007ರ ವಿಶ್ವಕಪ್ನ ಭಾರತ ತಂಡದಲ್ಲಿ ಗುಣಮಟ್ಟದ ಆಟಗಾರರು ಇದ್ದಾರೆ. ಆದ್ರೆ ಯಾರು ಕೂಡ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಆಟಗಾರರು ಒಬ್ಬರೊನ್ನೊಬ್ಬರು ನಂಬುತ್ತಿರಲಿಲ್ಲ. ತಂಡದಲ್ಲಿ ಒಗ್ಗಟ್ಟು ಇಲ್ಲದೇ ಇದ್ರೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯವನ್ನು ಹರ್ಭಜನ್ ಸಿಂಗ್ ವ್ಯಕ್ತಪಡಿಸಿದ್ದಾರೆ,
ಅದು ಏನಾಯ್ತು ಅಂತನೇ ಗೊತ್ತಿಲ್ಲ. ಬಲಿಷ್ಠ ತಂಡವೊಂದು ಮೊದಲ ಸುತ್ತಿನಲ್ಲೇ ನಿರ್ಗಮಿಸಿತ್ತು. ನಾವು ಭಾರತ ಮತ್ತು ಶ್ರೀಲಂಕಾ ವಿರುದ್ಧ ಸೋಲು ಅನುಭವಿಸಿದ್ದೇವು. ಹಾಗಂತ ಅವರದ್ದೇನೂ ಬಲಿಷ್ಠ ತಂಡವಾಗಿರಲಿಲ್ಲ. ಶ್ರೀಲಂಕಾ ತಂಡ ಫೈನಲ್ ನಲ್ಲಿ ಆಡಿತ್ತು. ನಾನು ಈಗಲೂ ಯೋಚಿಸುತ್ತಿದ್ದೇನೆ. ಫೈನಲ್ ನಲ್ಲಿ ನಾವು ಆಡಬೇಕಿತ್ತಲ್ವಾ ಅಂತ. ಇದು ನನ್ನ ಕ್ರಿಕೆಟ್ ಬದುಕಿನ ಅತ್ಯಂತ ಕೆಟ್ಟ ಘಟನೆ ಅಂತ ಹೇಳ್ತಾರೆ ಟರ್ಬನೇಟರ್.
ಇದೇ ಹರ್ಭಜನ್ ಸಿಂಗ್ 2007ರ ಟಿ-ಟ್ವೆಂಟಿ ವಿಶ್ವಕಪ್ ಗೆಲುವನ್ನು ಸ್ಮರಿಸಿಕೊಂಡಿದ್ದಾರೆ. 2007ರ ಟಿ-ಟ್ವೆಂಟಿ ವಿಶ್ವಕಪ್ ವೇಳೆ ಎಲ್ಲವೂ ಬದಲಾಗಿ ಹೋಯ್ತು. ನಾವು ಮತ್ತೆ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯ್ತು. ಆಗ ಕೋಚ್
ಗ್ರೇಗ್ ಚಾಪೆಲ್ ಇರಲಿಲ್ಲ. ಲಾಲ್ಚಾಂದ್ ರಜಪೂತ್, ವೆಂಕಟೇಶ್ ಪ್ರಸಾದ್, ರಾಬಿನ್ ಸಿಂಗ್ ನಮಗೆ ತರಬೇತುದಾರರಾಗಿದ್ದರು. ಇವರು ತಂಡದ ಒಗ್ಗಟ್ಟಿಗಾಗಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದರು. ಡ್ರೆಸಿಂಗ್ ರೂಂನ ವಾತಾವರಣವನ್ನು ಉತ್ತಮಗೊಳಿಸಿದ್ದರು ಅಂತಾರೆ ಭಜ್ಜಿ.
ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಗೆ ಹೋದಾಗ ನಮ್ಮದು ಜ್ಯೂನಿಯರ್ ಟೀಮ್. ರೋಹಿತ್ ಶರ್ಮಾ, ರಾಬಿನ್ ಉತ್ತಪ್ಪ, ಜೋಗಿಂದರ್ ಶರ್ಮಾ ಹೊಸ ಮುಖಗಳು. ತಂಡದಲ್ಲಿ ಹಿರಿಯ ಆಟಗಾರರು ಇರಲಿಲ್ಲ. ನಾನು, ಯುವಿ, ವೀರೀ, ಅಗರ್ಕರ್ ಸೇರಿ ಕೆಲವರು ಅನುಭವಿ ಆಟಗಾರರು ಮಾತ್ರ. ಆಗ ಯಾರೂ ಕೂಡ ನಿರೀಕ್ಷೆ ಮಾಡಿರಲಿಲ್ಲ. ನಾವು ವಿಶ್ವ ಕಪ್ ಗೆಲ್ಲುತ್ತೇವೆ ಅಂತ. ಆದ್ರೆ ನಾವು ವಿಶ್ವ ಚಾಂಪಿಯನ್ ಆದೆವು. ಯಾಕಂದ್ರೆ ತಂಡದಲ್ಲಿ ಅಂತಹ ಉತ್ತಮವಾದ ವಾತಾವರಣ ಇತ್ತು ಎಂಬುದನ್ನು ಕೂಡ ಹರ್ಭಜನ್ ಸಿಂಗ್ ಹೇಳಿದ್ದಾರೆ.








