ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹನುಮಂತಾಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. ಮದುವೆಯಾದ ಮರುದಿನವೇ ನವ ವರ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಮೃತ ದುರ್ದೈವಿ ರಮೇಶ್ (30) ಎಂದು ಗುರುತಿಸಲಾಗಿದೆ.
ನವೆಂಬರ್ 30ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿ ಸಮೀಪದ ಬಂಡ್ರಿ ಗ್ರಾಮದ ಯುವತಿಯನ್ನು ರಮೇಶ್ ಮದುವೆಯಾಗಿದ್ದರು. ಮದುವೆಯ ನಂತರ ನವ ದಂಪತಿ ವಧುವಿನ ಮನೆಗೆ ತೆರಳಿದ್ದರು. ನಂತರ ದೇವರ ಕೋಣೆಗೆ ಹೋಗಿ ಪ್ರಾರ್ಥನೆ ಮಾಡಿ ಹೊರಬರುತ್ತಿದ್ದಂತೆಯೇ ರಮೇಶ್ ಕುಸಿದು ಬಿದ್ದರು.
ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದರೆ ಚಿಕಿತ್ಸೆ ನೀಡುವ ಮುನ್ನವೇ ರಮೇಶ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ಹೊಸ ಜೀವನ ಆರಂಭಿಸಿದ ಕೇವಲ 24 ಗಂಟೆಗಳಲ್ಲೇ ಯುವಕನ ಅಕಾಲಿಕ ಸಾವು ಕುಟುಂಬದಲ್ಲಿ ಆಘಾತವನ್ನುಂಟು ಮಾಡಿದೆ. ಗ್ರಾಮದ ಜನರೂ ಈ ಘಟನೆಗೆ ಬೆಚ್ಚಿ ಬಿದ್ದಿದ್ದಾರೆ. ಕಾರಣಗಳು ಸ್ಪಷ್ಟವಾಗದಿದ್ದರೂ, ಹೃದಯಾಘಾತವೇ ಸಾವಿಗೆ ಕಾರಣ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.








