ಕೊರೊನಾದಿಂದ ದೂರವಿರಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ನೆಲ ನೆಲ್ಲಿ
ಮಂಗಳೂರು, ಜುಲೈ 15: ನೆಲ್ಲಿಯ ಎಲೆಗಳನ್ನೇ ಹೋಲುವ, ಪುಟ್ಟದಾದ ಕಾಯಿ/ಹಣ್ಣುಗಳು ಎಲೆಗಳ ಹಿಂಬದಿಗೆ ಅಂಟಿಕೊಂಡಿರುವ, ಸಾಮಾನ್ಯವಾಗಿ ಎಲ್ಲರೂ ನೋಡಿರುವ ಔಷಧೀಯ ಗುಣಗಳ ಆಗರದ ಗಿಡವೇ ನೆಲ ನೆಲ್ಲಿ. ಹಸಿರು-ಕೆಂಪು ಮಿಶ್ರಿತ ಕಾಂಡದ ಈ ಗಿಡವನ್ನು ಸಂಸ್ಕೃತದಲ್ಲಿ ಭೂಮ್ಯಾಮಲಕ ಮತ್ತು ಹಿಂದಿಯಲ್ಲಿ ಭೂ ಆಮ್ಲ ಎಂದು ಕರೆಯುತ್ತಾರೆ.
ಭಾರತದ ಎಲ್ಲೆಡೆಯೂ ಕಂಡು ಬರುವ ನೆಲ ನೆಲ್ಲಿಯನ್ನು ಕಿರು ನೆಲ್ಲಿ ಎಂದು ಕೂಡ ಕರೆಯುತ್ತಾರೆ.
ನೆಲಮಟ್ಟದಲ್ಲಿ ಬೆಳೆಯುವ ಈ ಪುಟ್ಟ ಸಸ್ಯ ನೆಲ ನೆಲ್ಲಿ, ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವುದಲ್ಲದೇ, ಜಾಂಡೀಸ್ ರೋಗಕ್ಕೆ, ಕಿಡ್ನಿ ಸ್ಟೋನ್ ಗೆ ರಾಮಬಾಣವಾಗಿದೆ. ಅಷ್ಟೇ ಅಲ್ಲ ಚರ್ಮ ಸಮಸ್ಯೆ, ಅತಿಸಾರ ಭೇದಿ, ಅಸ್ತಮಾ, ಕುಷ್ಠ, ಬಿಕ್ಕಳಿಕೆ ಮುಂತಾದವುಗಳ ನಿವಾರಣೆಯಲ್ಲಿ ಕೂಡ ಮಹತ್ವದ ಪಾತ್ರ ವಹಿಸುತ್ತದೆ.

ನಮ್ಮಲ್ಲಿ ರೋಗನಿರೋಧಕ ಶಕ್ತಿಯಿದ್ದರೆ, ಹೊರಗಡೆಯಿಂದ ಬರುವ ವೈರಾಣುವನ್ನು ತಡೆಗಟ್ಟಲು ಸಾಧ್ಯ ಎನ್ನುವುದು ಆಯುರ್ವೇದ ತಜ್ಞರು ಅಭಿಪ್ರಾಯ.
ಪ್ರಸ್ತುತ ಕೊರೊನಾ ಕಾಲಘಟ್ಟದಲ್ಲಿ ಕೋವಿಡ್-19 ಸೋಂಕಿನಿಂದ ದೂರವಿರಲು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಉತ್ತಮ. ಈ ನಿಟ್ಟಿನಲ್ಲಿ ನೆಲ ನೆಲ್ಲಿಯ ಕಷಾಯವನ್ನು ತಯಾರಿಸಿ ಪ್ರತಿದಿನ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನೆಲ ನೆಲ್ಲಿ ಕಷಾಯವನ್ನು ಮಾಡುವ ವಿಧಾನ

ನೆಲ ನೆಲ್ಲಿಯ ಬೇರು, ಎಲೆ, ಕಾಂಡ ಯಾವುದಾದರೂ ಭಾಗವನ್ನು ತೆಗೆದುಕೊಂಡು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕಷಾಯ ತಯಾರಿಸಿ, ಪ್ರತಿ ದಿನ ಈ ಕಷಾಯವನ್ನು ಸೇವಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.
ಜಾಂಡೀಸ್ / ಕಾಮಾಲೆ/ ಅರಿಶಿನ ರೋಗ ನಿಯಂತ್ರಣಕ್ಕೆ(ವೈದ್ಯರ ಸಲಹೆ ಮೇರೆಗೆ ಸೇವಿಸಬೇಕು)
1. ನೆಲ ನೆಲ್ಲಿ ಗಿಡದ ರಸವನ್ನು ಹಾಲು ಅಥವಾ ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯುವುದರಿಂದ ಜಾಂಡೀಸ್ ರೋಗ ನಿಯಂತ್ರಣಕ್ಕೆ ಬರುತ್ತದೆ.
2. ಒಂದು ತಾಜಾ ನೆಲನೆಲ್ಲಿ ಗಿಡವನ್ನು ಬೇರು ಸಮೇತ ತೆಗೆದುಕೊಂಡು, ಬಳಿಕ ಕಿತ್ತಿರುವ ಗಿಡದ ಬೇರನ್ನು ಬೇರ್ಪಡಿಸಬೇಕು. ನಂತರ ಉಳಿದ ನೆಲನೆಲ್ಲಿ ಗಿಡದ ಭಾಗವನ್ನು ಚೆನ್ನಾಗಿ ಅರೆದು ರುಬ್ಬಿ ಪೇಸ್ಟ್ ನ ರೂಪದಲ್ಲಿ ಮಾಡಿಕೊಳ್ಳಬೇಕು.ಈ ನೆಲನೆಲ್ಲಿ ಗಿಡದ ಪೇಸ್ಟ್ ಅನ್ನು ದಿನಕ್ಕೆ ನಾಲ್ಕು ಬಾರಿಯಂತೆ ಊಟಕ್ಕೂ ಮೊದಲು ಸೇವಿಸುತ್ತಾ ಬಂದರೆ ಜಾಂಡೀಸ್ ರೋಗವು ಕ್ರಮೇಣ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಲಾಗಿದೆ.

ಕಿಡ್ನಿ ಸ್ಟೋನ್
ತಾಜಾ ನೆಲನೆಲ್ಲಿ ಗಿಡವನ್ನು ಕಿತ್ತುಕೊಂಡು ಅದರ ಎಲೆ ಮತ್ತು ಚಿಕ್ಕ ಚಿಕ್ಕ ಕಾಯಿಗಳನ್ನು ಜಗಿದು ಹಾಗೆ ತಿನ್ನುವುದರಿಂದ ಕಿಡ್ನಿ ಸ್ಟೋನ್ ಸಮಸ್ಯೆಯನ್ನು ಶೀಘ್ರದಲ್ಲಿಯೇ ಗುಣಪಡಿಸಿಕೊಳ್ಳಬಹುದು
ಆಯುರ್ವೇದ ಗುಣಗಳುಳ್ಳ ನೆಲ ನೆಲ್ಲಿಯ ಇತರ ಪ್ರಯೋಜನಗಳು
ನೆಲನಲ್ಲಿ ಗಿಡದ ಕಷಾಯವನ್ನು ದಿನಕ್ಕೆ ಮೂರರಿಂದ ನಾಲ್ಕು ಬಾರಿ ಸೇವಿಸುವುದರಿಂದ ಅತಿಸಾರ ಭೇದಿ ನಿಲ್ಲುತ್ತದೆ.
ಗಾಯಗಳಿಗೆ ಮತ್ತು ಕಜ್ಜಿಗಳಿಗೆ ಈ ಗಿಡವನ್ನು ಬೇರು ಸಹಿತ ಜಜ್ಜಿ ರಸವನ್ನು ಲೇಪಿಸುವುದರಿಂದ ಗುಣವನ್ನು ಕಾಣಬಹುದು.
ನೆಲನೆಲ್ಲಿಯ ಎಲೆಗಳನ್ನು ಉಪ್ಪಿನೊಂದಿಗೆ ರುಬ್ಬಿ ಲೇಪಿಸುವುದರಿಂದ ಚರ್ಮರೋಗಗಳು ಗುಣವಾಗುತ್ತದೆ.
ಅಜೀರ್ಣ ಸಮಸ್ಯೆ ಇದ್ದರೆ ನೆಲನೆಲ್ಲಿ ಕಷಾಯಕ್ಕೆ, ಚಿಟಿಕೆ ಇಂಗನ್ನು ತುಪ್ಪದಲ್ಲಿ ಹುರಿದು ಬೆರೆಸಿ ಕುಡಿಯುವುದರಿಂದ ಪರಿಹಾರ ಕಾಣಬಹುದು.
ನೆಲನೆಲ್ಲಿ ಕಷಾಯವನ್ನು ವಾರಕ್ಕೆ 3 ದಿನ ಕುಡಿಯುತ್ತಾ ಬಂದರೆ ಮಕ್ಕಳಲ್ಲಿ ಕಂಡು ಬರುವ ಜ್ವರ, ಶೀತದಂತಹ ಸಮಸ್ಯೆಗಳು ಕೂಡ ಕಡಿಮೆಯಾಗುತ್ತದೆ ಮತ್ತು ರೋಗ ನಿರೋಧಕ ಶಕ್ತಿ ಕೂಡ ಹೆಚ್ಚುತ್ತದೆ.








