ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಕಲ್ಯಾಣ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಲ್ಲಿ ಯಾವುದೇ ಬದಲಾವಣೆ ಅಥವಾ ಪಟ್ಟಿಯ ಪರಿಷ್ಕರಣೆ ಇಲ್ಲವೆಂಬ ಸ್ಪಷ್ಟನೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳಕರ್ ನೀಡಿದ್ದಾರೆ. ಬೆಂಗಳೂರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಫಲಾನುಭವಿಗಳು ಯಾವುದೇ ಆತಂಕಕ್ಕೊಳಗಾಗುವ ಅವಶ್ಯಕತೆ ಇಲ್ಲ ಎಂದು ಭರವಸೆ ನೀಡಿದರು.
ಏಪ್ರಿಲ್ ಹಣ ಈಗಾಗಲೇ ಜಮಾ, ಮೇ ತಿಂಗಳ ಹಣ ವರ್ಗಾವಣೆ ಬಾಕಿ
ಯೋಜನೆಯಡಿ ಏಪ್ರಿಲ್ ತಿಂಗಳ ಹಣವನ್ನು ಫಲಾನುಭವಿಗಳ ಖಾತೆಗಳಿಗೆ ಈಗಾಗಲೇ ಜಮಾ ಮಾಡಲಾಗಿದೆ. ಮೇ ತಿಂಗಳ ಹಣವನ್ನು ಶೀಘ್ರದಲ್ಲೇ ವರ್ಗಾಯಿಸಲಾಗುತ್ತದೆ. ಇದರಿಗಾಗಿ ಹಣಕಾಸು ಇಲಾಖೆಯಿಂದ ಅನುದಾನ ಬಿಡುಗಡೆ ಆಗಬೇಕಿದೆ. ನಾವು ನಿರೀಕ್ಷೆಯಲ್ಲಿ ಇದ್ದೇವೆ ಎಂದು ಸಚಿವರು ಮಾಹಿತಿ ನೀಡಿದರು.
ಹಣ ಪಾವತಿ ವ್ಯವಸ್ಥೆಯಲ್ಲಿ ಬದಲಾವಣೆ
ಹಣ ಪಾವತಿ ಪ್ರಕ್ರಿಯೆಯಲ್ಲಿ ಈಗಾಗಲೇ ಕೆಲವೊಂದು ಬದಲಾವಣೆಗಳನ್ನು ಸರ್ಕಾರ ಕೈಗೊಂಡಿದ್ದು, ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬದಲು, ಜಿಲ್ಲೆಯ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಮೂಲಕ ಹಣ ಪಾವತಿ ಮಾಡಲಾಗುತ್ತಿದೆ ಎಂದು ಅವರು ವಿವರಿಸಿದರು.
ಪಟ್ಟಿ ತಿದ್ದುಪಡಿ ಕುರಿತು ಸುಳ್ಳು ವದಂತಿಗೆ ಸ್ಪಷ್ಟನೆ
ಇತ್ತೀಚೆಗೆ ಫಲಾನುಭವಿಗಳ ಪಟ್ಟಿಯಲ್ಲಿ ಪರಿಷ್ಕರಣೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದ ವದಂತಿಗಳಿಗೆ ಪ್ರತಿಕ್ರಿಯೆ ನೀಡಿದ ಹೆಬ್ಬಾಳಕರ್, ಪಟ್ಟಿ ಪರಿಷ್ಕರಣೆ ಎಂಬದು ಸಂಪೂರ್ಣ ಸುಳ್ಳು. ಎಲ್ಲಾ ಅರ್ಹ ಮಹಿಳೆಯರಿಗೆ ಸಕಾಲದಲ್ಲಿ ಹಣ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.








