ಬೆಂಗಳೂರು: ಮಹಿಳೆಯರಿಗೆ 2 ಸಾವಿರ ನೀಡುವ ಬದಲು ಬಾಣಂತಿಯರ ಬದುಕಿಗೆ ಗ್ಯಾರಂಟಿ ನೀಡಿದರೆ ಸಾಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ (R Ashok) ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಣಿ ಎಂಬಂತೆ ಗರ್ಭಿಣಿಯರು ಸಾವನ್ನಪ್ಪುತ್ತಿದ್ದಾರೆ. ಮಹಿಳೆಯರು ಜೀವಕ್ಕಾಗಿ ಅಂಗಲಾಚುವಂತಹ ಪರಿಸ್ಥಿತಿ ರಾಜ್ಯದಲ್ಲಿ ಬಂದಿದೆ. ಈಗ ಮಹಿಳೆಯರು 2 ಸಾವಿರ ಕೇಳುತ್ತಿಲ್ಲ. ಜೀವ ಕೇಳುತ್ತಿದ್ದಾರೆ. ಹೀಗಾಗಿ ಸರ್ಕಾರ ಬಾಣಂತಿಯರಿಗೆ ಬದುಕುವ ಗ್ಯಾರಂಟಿ ನೀಡಬೇಕು ಎಂದು ಹೇಳಿದ್ದಾರೆ.
ಸಚಿವ ದಿನೇಶ್ ಗುಂಡೂರಾವ್ ರಾಜೀನಾಮೆ ನೀಡಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು. ರಾಜ್ಯದಲ್ಲಿ 736 ಜನ ತಾಯಂದಿರು ಸಾವನ್ನಪ್ಪಿದ್ದಾರೆ. ಇದು ಸರ್ಕಾರದ ಪ್ರಾಯೋಜಿತ ಕೊಲೆ ಎಂಬಂತಾಗಿದೆ. ಕಾಂಗ್ರೆಸ್ ಸಮಾವೇಶದ ವೇಳೆಯೇ ಹೆಚ್ಚು ಬಾಣಂತಿಯರು ಸಾವನ್ನಪ್ಪಿದ್ದಾರೆ. ಆದರೂ ಹಿರಿಯ ನಾಯಕರು ಸಾಂತ್ವನ ಹೇಳುವ ಕಾರ್ಯ ಮಾಡಿಲ್ಲ ಎಂದು ಆರೋಪಿಸಿದ್ದಾರೆ.








