Gujarat Election : ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ BJP – ರವೀಂದ್ರ ಜಡೆಜಾ ಪತ್ನಿಗೆ ಟಿಕೆಟ್…
ಗುಜರಾತ್ ವಿಧಾನಸಭೆ ಚುನಾವಣೆಗೆ ಬಿಜೆಪಿ ಗುರುವಾರ ಮೊದಲ ಪಟ್ಟಿಯನ್ನ ಬಿಡುಗಡೆ ಮಾಡಿದೆ. 160 ಅಭ್ಯರ್ಥಿಗಳನ್ನ ಒಳಗೊಂಡ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘಟ್ಲೋಧಿಯಾದಿಂದ ಸ್ಪರ್ಧಿಸಲಿದ್ದಾರೆ. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಬದಲಿಗೆ ಡಾ.ದರ್ಶಿತಾ ಶಾ ರಾಜ್‌ಕೋಟ್ ಪಶ್ಚಿಮದಿಂದ ಸ್ಪರ್ಧಿಸಲಿದ್ದಾರೆ.
ಮೋರ್ಬಿಯಲ್ಲಿ ಹಾಲಿ ಶಾಸಕ ಬ್ರಿಜೇಶ್‌ಗೆ ಬಿಜೆಪಿ ಟಿಕೆಟ್ ಕೈ ತಪ್ಪಿದ್ದು, ಅವರ ಬದಲಿಗೆ ಮಾಜಿ ಶಾಸಕ ಕಾಂತಿಲಾಲ್ ಅಮೃತಿಯಾ ಅವರಿಗೆ ಟಿಕೆಟ್ ನೀಡಲಾಗಿದೆ. ಮೋರ್ಬಿ ಸೇತುವೆ ಅಪಘಾತದ ಸಂದರ್ಭದಲ್ಲಿ ಕಾಂತಿಲಾಲ್ ಜನರ ಜೀವ ಉಳಿಸಲು ನದಿಗೆ ಹಾರಿದ್ದರು. ಜಾಮ್‌ನಗರ ಉತ್ತರ ಕ್ಷೇತ್ರದಿಂದ ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬಾ ಅವರಿಗೆ ಟಿಕೆಟ್ ನೀಡಲಾಗಿದೆ.
ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಬುಧವಾರ ದೆಹಲಿಯಲ್ಲಿ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆ ನಡೆಯಿತು. ಸುಮಾರು 3 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ರಾಜನಾಥ್ ಸಿಂಗ್ ಭಾಗವಹಿಸಿದ್ದರು. ಗುಜರಾತ್‌ನ 182 ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರನ್ನು ಸಭೆಯಲ್ಲಿ ಚರ್ಚಿಸಲಾಯಿತು.
ಮೂಲಗಳ ಪ್ರಕಾರ ಬಿಜೆಪಿ 38 ಶಾಸಕರ ಟಿಕೆಟ್ ಕಡಿತಗೊಳಿಸಿದ್ದು, 69 ಶಾಸಕರು ಮತ್ತೆ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನಿಂದ ಬಂದಿದ್ದ ಹಾರ್ದಿಕ್ ಪಟೇಲ್ ಮತ್ತು ಅಲ್ಪೇಶ್ ಠಾಕೂರ್ ಅವರಿಗೂ ಟಿಕೆಟ್ ನೀಡಲಾಗಿದೆ.
Gujarat Election 2022 BJP Candidates List Update Narendra Modi Amit Shah








