ಸಿಪಿಎಲ್ 2020- ಸೆಂಟ್ ಕಿಟ್ಸ್ ತಂಡಕ್ಕೆ ಸತತ ಎರಡನೇ ಸೋಲು..ಗಯಾನ ಗೆಲುವಿಗೆ ಹೆಟ್ಮೇರ್, ಪೌಲ್ ನೆರವು
ಕಿಮೋ ಪೌಲ್ ಅವರ ಮಾರಕ ಬೌಲಿಂಗ್ ಮತ್ತು ಶಿಮ್ರೋನ್ ಹೆಟ್ಮೇರ್ ಅವರ ಬಿರುಗಾಳಿಯ ಬ್ಯಾಟಿಂಗ್ ನೆರವನ್ನು ಪಡೆದ ಗಯಾನ ಅಮೇಝಾನ್ ವಾರಿಯರ್ಸ್ ತಂಡ ತನ್ನ ಎರಡನೇ ಪಂದ್ಯದಲ್ಲಿ ಖಾತೆ ತೆರೆದಿದೆ. ಸಿಪಿಎಲ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಮೂರು ವಿಕೆಟ್ ಗಳಿಂದ ಸೇಂಟ್ ಕಿಟ್ಸ್ ಆಂಡ್ ನೇವಿಸ್ ಪೆಟ್ರಿಯೋಟ್ಸ್ ತಂಡದ ವಿರುದ್ಧ ಗೆಲುವಿನ ನಗೆ ಬೀರಿತ್ತು.
ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಮೊದಲು ಸೇಂಟ್ ಕಿಟ್ಸ್ ಆಂಡ್ ನೇವಿಸ್ ಪೆಟ್ರಿಯೋಟ್ಸ್ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನವನ್ನು ನೀಡಿತ್ತು. ಸೇಂಟ್ಸ್ ಕಿಟ್ಸ್ ತಂಡ ಆರಂಭಿಕ ಕ್ರಿಸ್ ಲಿಯಾನ್ 16 ರನ್ ಗಳಿಸಿ ಇಮ್ರಾನ್ ತಾಹೀರ್‍ಗೆ ವಿಕೆಟ್ ಒಪ್ಪಿಸಿದ್ರೆ, ಎವಿನ್ ಲೂಯಿಸ್ (30 ರನ್) ಅವರು ಗ್ರೀನ್ ಅವರಿಗೆ ಬಲಿಯಾದ್ರು. ನಂತರ ಸೇಂಟ್ ಕಿಟ್ಸ್ ಆಂಡ್ ನೇವಿಸ್ ಪೆಟ್ರಿಯೋಟ್ಸ್ ತಂಡಕ್ಕೆ ಆಘಾತದ ಮೇಲೆ ಆಘಾತ ನೀಡಿದ್ದು ಕಿಮೋ ಪೌಲ್. ಮಾರಕ ಬೌಲಿಂಗ್ ಪ್ರದರ್ಶನ ನೀಡಿದ್ದ ಕಿಮೊ ಪೌಲ್ 4 ಓವರ್ ಗಳಲ್ಲಿ 19 ರನ್ ನೀಡಿ ನಾಲ್ಕು ವಿಕೆಟ್ ಉರುಳಿಸಿದ್ರು. ಸೇಂಟ್ ಕಿಟ್ಸ್ ತಂಡದ ಪರ ಡಂಕ್ 29 ರನ್, ನಾಯಕ ಎಮ್ರಿಟ್ 17 ರನ್ ಗಳಿಸಿದ್ರು. ಇನ್ನುಳಿದ ಬ್ಯಾಟ್ಸ್ ಮೆನ್ ಗಳು ಒಂದಂಕಿ ಮೊತ್ತಕ್ಕೆ ಸೀಮಿತವಾದ್ರು. ಅಂತಿಮವಾಗಿ ಸೇಂಟ್ ಕಿಟ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ಗೆ 127 ರನ್ ಗಳಿಸಿತ್ತು.
ಸುಲಭ ಸವಾಲನ್ನು ಬೆನ್ನಟ್ಟಿದ್ದ ಗಯಾನ ವಾರಿಯರ್ಸ್ ಆರಂಭದಲ್ಲೇ ಶಾಕ್ ಅನುಭವಿಸಿತ್ತು. ಬ್ರೆಂಡನ್ ಕಿಂಗ್ 10 ರನ್ ಗಳಿಸಿದ್ರೆ, ಹೇಮ್ ರಾಜ್ ಚಂದ್ರಪಾಲ್ 19 ರನ್ ಗೆ ಸುಸ್ತಾಗಿಬಿಟ್ರು. ಆದ್ರೆ ಮತ್ತೊಂದೆಡೆ ಶಿಮ್ರೋನ್ ಹೆಟ್ಮೇರ್ ಸೇಂಟ್ ಕಿಟ್ಸ್ ಬೌಲರ್‍ಗಳ ಚಳಿ ಬಿಡಿಸುವಂತೆ ಬ್ಯಾಟಿಂಗ್ ಮಾಡಿದ್ರು. ಇನ್ನೊಂದೆಡೆ ಗಯಾನ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ದಾರಿ ಹಿಡಿಯುತ್ತಿದ್ರು.
ಆದ್ರೂ ತಲೆಕೆಡಿಸಿಕೊಳ್ಳದ ಶಿಮ್ರೋನ್ ಹೆಟ್ಮೇರ್ ಅವರು ಏಕಾಂಗಿಯಾಗಿ ತಂಡವನ್ನು ಗೆಲುವಿನ ದಡ ಸೇರಿಸಿದ್ರು. 44 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಹೆಟ್ಮೇರ್ ಅವರು ಆಕರ್ಷಕ 71 ರನ್ ಗಳಿಸಿದ್ರು. ಪರಿಣಾಮ ಗಯಾನ ಅಮೇಝಾನ್ ವಾರಿಯರ್ಸ್ ತಂಡ 17 ಓವರ್ ಗಳಲ್ಲಿ ಏಳು ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತ್ತು. ಈ ಮೂಲಕ ಅಂಕ ಪಟ್ಟಿಯಲ್ಲಿ ಖಾತೆಯನ್ನು ತೆರೆಯಿತ್ತು. ಸೇಂಟ್ ಕಿಟ್ಸ್ ತಂಡ ಸತತ ಎರಡನೇ ಸೋಲು ಅನುಭವಿಸಿತ್ತು.








