ಸಿಪಿಎಲ್ 2020- ಗಯಾನ ವಾರಿಯರ್ಸ್ ಗೆ ತಲೆಬಾಗಿದ ಸೇಂಟ್ ಲೂಸಿಯಾ
2020ರ ಕೆರೆಬಿಯನ್ ಪ್ರೀಮಿಯರ್ ಕ್ರಿಕೆಟ್ ಟೂರ್ನಿಯಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳಿದೆ. ಟೂರ್ನಿಯ 24ನೇ ಪಂದ್ಯದಲ್ಲಿ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಏಳು ವಿಕೆಟ್ ಗಳಿಂದ ಸೇಂಟ್ ಲೂಸಿಯಾ ಝೌಕ್ಸ್ ತಂಡವನ್ನು ಸೋಲಿಸಿದೆ.
ಈ ಗೆಲುವಿನೊಂದಿಗೆ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆಡಿರುವ 9 ಪಂದ್ಯಗಳಲ್ಲಿ ಐದು ಪಂದ್ಯಗಳನ್ನು ಗೆದ್ದು, ನಾಲ್ಕು ಪಂದ್ಯಗಳನ್ನು ಸೋತು ಒಟ್ಟು 10 ಅಂಕಗಳನ್ನು ಪಡೆದುಕೊಂಡಿದೆ. ಇನ್ನೊಂದೆಡೆ ಸೇಂಟ್ ಲೂಸಿಯಾ ಝೌಕ್ಸ್ ತಂಡ ಮೂರನೇ ಸ್ಥಾನಕ್ಕಿಳಿದಿದೆ. ಎಂಟು ಪಂದ್ಯಗಳಲ್ಲಿ ಐದು ಗೆಲುವು ಮತ್ತು ಮೂರು ಸೋಲಿನೊಂದಿಗೆ 10 ಅಂಕ ಪಡೆದುಕೊಂಡಿದೆ.
ಟ್ರಿನಿಡಾಡ್ ನ ಬ್ರಿಯಾನ್ ಲಾರಾ ಮೈದಾನದಲ್ಲಿ ಟಾಸ್ ಗೆದ್ದ ಗಯಾನ ಅಮೇಝಾನ್ ವಾರಿಯರ್ಸ್ ತಂಡ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತ್ತು. ಲೆಕ್ಕಚಾರದ ಪ್ರಕಾರವೇ ಆಟವನ್ನಾಡಿದ್ದ ಗಯಾನ ವಾರಿಯರ್ಸ್ ತಂಡದ ಬೌಲರ್ ಗಳು ಸೇಂಟ್ ಲೂಸಿಯಾ ತಂಡಕ್ಕೆ ಕಂಟಕವಾಗಿ ಕಾಡಿದ್ರು. ಪರಿಣಾಮ ಸೇಂಟ್ ಲೂಸಿಯಾ ಝೌಕ್ಸ್ ತಂಡ ಏಳು ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತ್ತು. ರಖೀಮ್ ಕಾರ್ನ್ವೆಲ್ 21 ರನ್ ಹಾಗೂ ನಜಿಬುಲ್ ಝದ್ರಾನ್ 19 ರನ್ ದಾಖಲಿಸಿದ್ರು.
ಸುಲಭ ಸವಾಲನ್ನು ಬೆನ್ನಟ್ಟಿದ್ದ ಗಯಾನ ವಾರಿಯರ್ಸ್ ತಂಡಕ್ಕೆ ಶಿಮ್ರೋನ್ ಹೆಟ್ಮೇರ್ ಆಧಾರವಾಗಿ ನಿಂತ್ರು. 36 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳನ್ನು ಸಿಡಿಸಿದ್ದ ಶಿಮ್ರೋನ್ ಅಜೇಯ 56 ರನ್ ಗಳಿಸಿ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದ್ರು. ಅಂತಿಮವಾಗಿ ಗಯಾನ ವಾರಿಯರ್ಸ್ ತಂಡ 13.5 ಓವರ್ ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 110 ರನ್ ಗಳಿಸಿ ಗೆಲುವಿನ ನಗೆ ಬೀರಿತ್ತು. ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಶಿಮ್ರೋನ್ ಹೆಟ್ಮೇರ್ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದ್ರು.