ಬೆಂಗಳೂರು : ಸದ್ಯಕ್ಕೆ ರಾಜ್ಯದಲ್ಲಿ ಜಿಮ್ ಗಳು ಆರಂಭವಾಗುವುದಿಲ್ಲ ಎಂದು ಕಂದಾಯ ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಕೊರೊನಾ ವೈರಸ್ ಸೋಂಕನ್ನು ನಿಯಂತ್ರಿಸುವಲ್ಲಿ ಬೆಂಗಳೂರು ನಗರ ಯಶಸ್ವಿ ಆಗಿದೆ. ಕೇಂದ್ರ ಸರ್ಕಾರ ಪ್ರಶಂಸೆ ಮಾಡಿದ್ದು ಖುಷಿ ತಂದಿದೆ. ಇದಕ್ಕೆ ನಮ್ಮ ವೈದ್ಯ ಸಿಬ್ಬಂದಿ, ಅಧಿಕಾರಿ ವರ್ಗ ಸೇರಿ ಎಲ್ಲ ಇಲಾಖೆಗಳ ಶ್ರಮ ಕಾರಣ ಎಂದರು.
ಇದೇ ವೇಳೆ ಜಿಮ್ ಗಳು ಓಪನ್ ಆಗುವ ಬಗ್ಗೆ ಮಾತನಾಡಿದ ಅವರು, ಸದ್ಯಕ್ಕೆ ರಾಜ್ಯದಲ್ಲಿ ಜಿಮ್ ಗಳು ಆರಂಭವಾಗಲ್ಲ. ಲಾಕ್ ಡೌನ್ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಮುದಾಯಗಳಿಗೆ ಈಗಾಗಲೇ ಸಹಾಯಧನ ಘೋಷಣೆ ಮಾಡಿದ್ದೇವೆ. ನೇಕಾರರು, ಕ್ಷೌರಿಕ ವೃತ್ತಿ ಅವರಿಗೂ ಸಂಕಷ್ಟ ಇತ್ತು ಆ ಸಮುದಾಯಗಳನ್ನು ಗುರುತಿಸಿದ್ದೇವೆ. ನಮ್ಮ ರಾಜ್ಯದ ಹಣಕಾಸು ಸ್ಥಿತಿ ಬಗ್ಗೆಯು ನೋಡಬೇಕಿದೆ. ಮುಂದಿನ ದಿನಗಳಲ್ಲಿ ಕೆಲ ಸಮುದಾಯಗಳಿಗೆ ಸಹಾಯಧನ ನೀಡುವ ಬಗ್ಗೆ ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸುತ್ತೇವೆ ಎಂದು ಮಾಹಿತಿ ನೀಡಿದರು. ತಮಿಳುನಾಡು ಮಾದರಿಯಲ್ಲಿ ರಾಜ್ಯದಲ್ಲೂ ಸ್ಟಾಪ್ ಡ್ಯೂಟಿಗೆ ರಿಯಾಯಿತಿ ಕೊಡುವ ಬಗ್ಗೆ ಚಿಂತನೆ ನಡೆದಿದೆ. ಈ ಬಗ್ಗೆ ಇಂದು ಸಂಜೆ ಸಿಎಂ ಜತೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ ಎಂದು ಆರ್ ಆಶೋಕ್ ಅವರು ಹೇಳಿದ್ದಾರೆ.








