PFI ಬ್ಯಾನ್ ಬಗ್ಗೆ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು ?
ರಾಮನಗರ : ಕೇಂದ್ರ ಸರ್ಕಾರ ದೇಶದಾದ್ಯಂತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ಐದು ವರ್ಷಗಳ ಕಾಲ ಬ್ಯಾನ್ ಮಾಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಈ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಪಿಎಫ್ ಐ ಮುಖಂಡರ ಮನೆ ಮೇಲೆ NIA ಅವರು ದಾಳಿ ಮಾಡಿದ್ರು, ಮೊನ್ನೆ ತಡರಾತ್ರಿ ಪೊಲೀಸರು ಮತ್ತೆ ಅವರ ಮನೆ ಮೇಲೆ ದಾಳಿ ಮಾಡಿ ಬಂಧಿಸಿದ್ದಾರೆ.
ರಾಜ್ಯದಲ್ಲಿ 150 ಕ್ಕೂ ಹೆಚ್ಚು ಪಿಎಫ್ ಐ ಸಂಘಟನೆಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇವತ್ತು ಬೆಳಿಗ್ಗೆ ಕೇಂದ್ರದ ಗೃಹ ಇಲಾಖೆ ಪಿಎಫ್ ಐ ಸಂಘಟನೆ ಜೊತೆಗೆ ಹಲವು ಸಂಘಟನೆಗಳನ್ನು ಬ್ಯಾನ್ ಮಾಡಿದೆ.
ಯಾವುದೇ ಸಂಘ ಸಂಸ್ಥೆಗಳು ಈ ದೇಶದಲ್ಲಿ ಅಶಾಂತಿಯ ವಾತಾವರಣವನ್ನು ಸೃಷ್ಟಿ ಮಾಡುತ್ತವೆ, ಕಾನೂನು ಬಾಹಿರ ಚಟುವಟಿಕೆಗಳನ್ನು ಮಾಡುವ ಸಂಘಟನೆಗಳನ್ನು ಬ್ಯಾನ್ ಮಾಡಿ ಕಠಿಣ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ ಎಂದಿದ್ದಾರೆ.
ಪಿಎಫ್ಐನ ಕಾರ್ಯಕರ್ತರ ಬಂಧಿನ ಏನಿದೆ ? ಅವರ ಬ್ಯಾಗ್ ಗ್ರೌಂಡ್, ಆಂಟಿ ಸೋಷಿಯಲ್ ಆಕ್ಟಿವಿಟಿ ಏನಿದೆ ಎಂಬುದನ್ನ ಜನರ ಮುಂದೆ ಇಡಬೇಕು.

ಯಾರೇ ತಪ್ಪು ಮಾಡಿದ್ರೂ ಅವರ ಮೇಲೆ ಉಗ್ರವಾದ ಕ್ರಮ ಕೈಗೊಳ್ಳಬೇಕು. ಸಂಘಟನೆಗಳನ್ನು ಬ್ಯಾನ್ ಮಾಡಿದ್ರೆ ಸಮಾಜ ಘಾತುಕ ಕೆಲಸಗಳು ನಿಲ್ಲುತ್ತವೆ ಅನ್ನೋದು ಸುಳ್ಳು.
ಸಂಘಗಳನ್ನು 5 ವರ್ಷ ಬ್ಯಾನ್ ಮಾಡಿದ್ದೀವಿ ಅಂತಾ ಸರ್ಕಾರ ಹೇಳಬಹುದು. ಸಮಾಜ ಘಾತುಕ ಶಕ್ತಿಗಳ ಹಿನ್ನಲೆ ಏನಿದೆ ಎಂಬುದನ್ನ ಅರಿಯಬೇಕು.
ಸಂಘಗಳನ್ನು ಬ್ಯಾನ್ ಮಾಡಿದ್ರೆ ನಿಲ್ಲುತ್ತೆ ಅನ್ನೋದನ್ನ ಹೇಳೊಕಾಗಲ್ಲ. ಈ ರೀತಿಯ ವಾತಾವರಣ ನಿರ್ಮಾಣ ಆಗೋಕೆ ಕಾರಣ ಏನಿದೆ ಎಂಬುದನ್ನು ತಿಳಿಯಬೇಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟ, ಈ ನಾಡಿನಲ್ಲಿ ಯಾವುದೇ ರೀತಿಯ ಸಂಘರ್ಷಗಳು,ಗಲಭೆಗಳು ಆಗಬಾರದು.
ಆ ನಿಟ್ಟಿನಲ್ಲಿ ಸರ್ಕಾರ ಎಲ್ಲರ ವಿಶ್ವಾಸ ಗಳಿಸಿ ಎಲ್ಲರ ಪರವಾಗಿ ನಾವು ಇದ್ದೇವೆ ಎಂಬ ಸಂದೇಶ ಸಾರಬೇಕು.
ಸಮಾಜದಲ್ಲಿ ಪರಸ್ಪರ ವಿಶ್ವಾಸದ ಕೊರತೆಯನ್ನು ನಾವೇ ಮೂಡಿಸಿದ್ರೆ ಹೇಗೆ ? ಈ ಸಂಘ ಸಂಸ್ಥೆಗಳಿಂದ ಆಗಿರುವ ಕಾನೂನು ಬಾಹಿರ ಚಟುವಟಿಕೆಗಳನ್ನು ಜನರ ಮುಂದೆ ಇಡಬೇಕು.
ಜನರ ಮುಂದೆ ನೀವು ಇಡಲಿಲ್ಲ ಅಂದ್ರೆ ಸರ್ಕಾರದ ಮೇಲೆ ಅಪನಂಬಿಕೆ ಬರುತ್ತದೆ ಎಂದು ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.









