H D Kumaraswamy | ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ ದೇಶಕ್ಕೆ ಅಪಾಯ
ಬೆಂಗಳೂರು : ದೇಶಕ್ಕೆ ಅಪಾಯ ಇರುವುದು ʼಕುಟುಂಬವಾದಿ ಪಕ್ಷಗಳಿಂದಲ್ಲ, ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ “ಕುಟುಂಬ ಆಧರಿತ ಪಕ್ಷಗಳು ದೇಶಕ್ಕೆ ಮತ್ತು ಯುವಜನರ ಪಾಲಿಗೆ ದೊಡ್ಡ ಶತ್ರು. ಇದು ರಾಜಕಾರಣದ ದೊಡ್ಡ ಸಮಸ್ಯೆಯೂ ಹೌದು” ಎಂಬ ಹೇಳಿಕೆಗೆ ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಕುಮಾರಸ್ವಾಮಿ ತನ್ನ ಟ್ವಿಟ್ಟರ್ ಖಾತೆಯಲ್ಲಿ…
ಜನಸಂಘ ಬಿಜೆಪಿಯಾಗಿ ರೂಪಾಂತರಗೊಂಡು ಕೇಂದ್ರದಲ್ಲಿ ಅಧಿಕಾರ ಹಿಡಿದಿದ್ದು ತನ್ನ ಸ್ವಂತ ಶಕ್ತಿಯಿಂದೇನಲ್ಲ. ಇದೇ ಕುಟುಂಬ ಕೇಂದ್ರಿತ ಪಕ್ಷಗಳ ಊರುಗೋಲಿನಿಂದ. NDA ಹುಟ್ಟಿದ್ದು ಹೇಗೆ? ಹುಟ್ಟಿದಾಗ ಎಷ್ಟು ಪಕ್ಷಗಳಿದ್ದವು? ಈಗೆಷ್ಟಿವೆ? ಈ ಮಾಹಿತಿ ಮೋದಿ ಅವರ ಮನದಲ್ಲಿ ಇರಬೇಕಿತ್ತು.
ಲೊಕಸಭೆಯಲ್ಲಿ ಈಗ ಬಿಜೆಪಿಗೆ 303 ಸೀಟುಗಳಿವೆ. ಆದರೆ, ಎಷ್ಟು ಸೀಟುಗಳಿಂದ ಈ ಅಂಕಿ ಆರಂಭವಾಯಿತು? ಆ ಪಕ್ಷದ ಪ್ರಯಾಣ ಶುರುವಾಗಿದ್ದು ಎಲ್ಲಿಂದ? ಮೊದಲಿನದ್ದೆಲ್ಲವನ್ನೂ ಮೋದಿ ಮರೆತರೆ ಹೇಗೆ? ಈಗಲೂ ಅವರು ಟೀಕಿಸಿದ ಕುಟುಂಬ ಕೇಂದ್ರಿತ ಪಕ್ಷಗಳು NDA ಕೂಟದಲ್ಲಿವೆಯಲ್ಲಾ!

ಇತ್ತೀಚೆಗೆ, ನಿತ್ಯವೂ ಕುಟುಂಬ ರಾಜಕಾರಣ-ಭ್ರಷ್ಟಾಚಾರದ ಬಗ್ಗೆ ಹೇಳುವ ಅವರ ಪಕ್ಷದಲ್ಲೇ ಇರುವ ʼವಂಶವೃಕ್ಷದ ಘೋಂಡಾರಣ್ಯ & ಭ್ರಷ್ಟಾಚಾರʼ ಕೂಪದ ಬಗ್ಗೆ ಅವರೇಕೆ ದಿವ್ಯಮೌನ ವಹಿಸುತ್ತಾರೆ! ಕರ್ನಾಟಕದಿಂದ ಹಿಡಿದು, ವಿಂಧ್ಯ ಪರ್ವತದ ಆಚೆಗೂ ಬಿಜೆಪಿಗರ ಕುಟುಂಬಗಳ ಕುಲಕಸುಬು ರಾಜಕೀಯವೇ ಆಗಿ, ಭ್ರಷ್ಟಾಚಾರವು ಅವರ ನಿತ್ಯ ಆಚಾರ ಆಗಿದೆ.
ದೇಶಕ್ಕೆ ಅಪಾಯ ಇರುವುದು ʼಕುಟುಂಬವಾದಿ ಪಕ್ಷಗಳಿಂದಲ್ಲ, ಬಿಜೆಪಿಯಂಥ ಕೋಮುವಾದಿ ಪಕ್ಷದಿಂದ.ʼ ಭಾವನಾತ್ಮಕವಾಗಿ ಜನರನ್ನು ಜಗಳಕ್ಕಿಳಿಸಿ ಜಾಗ ಹಿಡಿಯುವ ಪರಿಪಾಠ ಪ್ರಜಾಪ್ರಭುತ್ವದ ನಿಜವಾದ ದೊಡ್ಡ ಶತ್ರು. ಸಂವಿಧಾನಕ್ಕೆ ಗಂಡಾಂತರಕಾರಿ. ಮಾನ್ಯ ಮೋದಿ ಅವರಿಗೆ ಈ ವಿಷಯ ಗೊತ್ತಿಲ್ಲವೆಂದು ನಾನು ಭಾವಿಸುವುದಿಲ್ಲ ಎಂದು ಕಿಡಿಕಾರಿದ್ದಾರೆ.
h-d-kumaraswamy-The country is threatened by a communal bjp








