ರಾಮನಗರ : ವಿಧಾನ ಪರಿಷತ್ ಗೆ ಸಿನಿಮಾ ಕ್ಷೇತ್ರದಿಂದ ನಾಮನಿರ್ದೇಶನಗೊಂಡ ಸಿ.ಪಿ ಯೋಗೇಶ್ವರ್ ಇದೇ ಬಳಿಕ ಮೊದಲ ಬಾರಿಗೆ ಚನ್ನಪಟ್ಟಣ್ಣಕ್ಕೆ ಇಂದು ಭೇಟಿ ನೀಡಿದ್ದರು. ಈ ವೇಳೆ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಹೆಚ್.ಡಿ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಇಬ್ಬರೂ ರಿಟೈರ್ಡ್ ಕುದುರೆಗಳು. ಅವರಿಂದ ಪಕ್ಷ ಸಂಘಟನೆ ಅಸಾಧ್ಯ. ನಾನು ನನ್ನದೇ ಆದ ರೀತಿ ನನ್ನ ಸಾಮರ್ಥ್ಯದ ಇತಿಮಿತಿಯಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಜವಾಬ್ದಾರಿಯನ್ನೂ ಪಕ್ಷ ಕೊಡಬಹುದು, ಕಾದು ನೋಡೋಣ ಎಂದು ಹೇಳಿದರು.
ಚುನಾವಣೆಯಲ್ಲಿ ಕ್ಷೇತ್ರದ ಜನರು ನನ್ನ ಕೈಬಿಟ್ಟರೂ ಪಕ್ಷ ಕೈಹಿಡಿದಿದೆ. ಸಾರ್ವಜನಿಕ ಜೀವನ ಕೊನೆಯಾಗಬಾರದು ಎಂದು ಬಿಜೆಪಿ ಆಶ್ರಯ ನೀಡಿದೆ. ಮುಂದಿನ ದಿನಗಳಲ್ಲಿ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿ ಕಡೆಗೆ ಗಮನಕೊಡುತ್ತೇನೆ ಎಂದು ತಿಳಿಸಿದ ಯೋಗೇಶ್ವರ್, ಕಳೆದ ಎರಡು ವರ್ಷಗಳಲ್ಲಿ ಕುಮಾರ ಸ್ವಾಮಿಯವರು ಕ್ಷೇತ್ರಕ್ಕೆ ಎಷ್ಟು ಅನುದಾನ ತಂದಿದ್ದಾರೆ. ಯಾವೆಲ್ಲ ಕೆಲಸ ಕಾರ್ಯ ಆಗಿವೆ ಎಂದು ಪರಿಶೀಲನೆ ಮಾಡ್ತೇನೆ ಎಂದು ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದರು.
ಇದೇ ವೇಳೆ ಡಿ.ಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾದ ಬಗ್ಗೆ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಹಿಂದೆಯೂ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದರು. ಈಗ ಅಧ್ಯಕ್ಷರಾಗಿದ್ದಾರೆ. ಆದರೆ ಅವರಿಂದ ಪಕ್ಷ ಕಟ್ಟಲು ಸಾಧ್ಯವಿಲ್ಲ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಅವರಿಗೆ ರಾಜಕೀಯವಾಗಿ ಆಶ್ರಯ ಕೊಡಲಿದೆ ಅಷ್ಟೇ ಎಂದು ಯೋಗೇಶ್ವರ್ ವ್ಯಂಗ್ಯವಾಡಿದರು.