ಕೊಡಗು | ಆಲಿಕಲ್ಲು ಮಳೆ ಎಫೆಕ್ಟ್.. ರೈತ ಕಂಗಾಲು
ಕೊಡಗು : ಸೋಮವಾರಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ನಿರಂತರವಾಗಿ ಆಲಿಕಲ್ಲು ಮಳೆ ಆಗಿದ್ದು, ಅಪಾರ ಪ್ರಮಾಣದ ಬೆಳೆ ನಾಶವಾಗಿದೆ. ಇದರಿಂದ ರೈತರು ಕಂಗಾಲಾಗಿದ್ದು, ಪರಿಹಾರಕ್ಕೆ ಮನವಿ ಮಾಡಿದ್ದಾರೆ.
ತಾಲೂಕಿನ ಶನಿವಾರಸಂತೆ ವ್ಯಾಪ್ತಿಯ ಅಂಕನಹಳ್ಳಿ, ಗಂಗಾವಾರ, ಸಿಗೆಹೊಸೂರು, ಮೆಣಸ, ಬೆಟ್ಟದಳ್ಳಿ, ಮನೆಹಳ್ಳಿ,ನಾಗವಾರ, ಮೈತಪುರ, ಬಡುಬಸವನಳ್ಳಿ, ನಿಡ್ತ, ದೊಡ್ಡಳ್ಳಿ, ಮುಳ್ಳೂರು ಸೇರಿದಂತೆ ಹಲವು ಗ್ರಾಮಗಳು ಆಲಿಕಲ್ಲು ಮಳೆಗೆ ತುತ್ತಾಗಿದ್ದು ವಿವಿಧ ಬೆಳೆಗಳಿಗೆ ಅಪಾರ ನಷ್ಟವಾಗಿದೆ.
ಈಗಾಗಲೇ ಈ ಭಾಗದಲ್ಲಿ ಕಾಫಿ ಕುಯಿಲಿಗೆ ಬಂದ ಪರಿಣಾಮ ಕಾಫಿಗೆ ಹೆಚ್ಚು ಹಾನಿಯಾಗಿಲ್ಲವಾದರೂ ಗಿಡಗಳು ಹಾನಿಗೊಳಪಟ್ಟಿದೆ. ಆದರೆ ಗಿಡಗಳಿಗೆ ಆಲಿಕಲ್ಲು ಮಳೆ ಬಿದ್ದ ಹಿನ್ನೆಲೆಯಲ್ಲಿ ಅಂದಾಜು 500 ಏಕರೆ ಕಾಫಿಗಿಡಗಳು ತೀವ್ರ ಹಾನಿಯಾಗಿದೆ.
ಏಕಾಏಕಿ ಬಿದ್ದ ಆಲಿಕಲ್ಲಿನ ಮಳೆಯಿಂದಾಗಿ ಅಂಗಳ, ಕಣಗಳಲ್ಲಿ ಒಣಗಲು ಹಾಕಿದ್ದ ಫಸಲು ಕೊಚ್ಚಿ ಹೋಗಿದ್ದು ಒಂದೆಡೆಯಾದರೆ ಕೆಲವೆಡೆ ಎರಡು ದಿನಗಳವರೆಗೂ ಆಲಿಕಲ್ಲು ಕರಗದೆ ಕಾಫಿ, ಕಾಳು ಮೆಣಸು ಕೊಳೆತು ಹೋಗಿವೆ.
ಇನ್ನೊಂದೆಡೆ ಅತೀ ಹೆಚ್ಚು ಬೆಳೆಯುವ ಹಸಿ ಮೆಣಸಿನ ಗಿಡಗಳಲ್ಲಿ ಎಲೆ, ಹೂ ಉದುರಿದ್ದು, ಗಿಡಗಳು ಕೊಳೆಯುತ್ತಿವೆ. ಇನ್ನು ಈ ಕೃಷಿಯನ್ನೇ ನಂಬಿ ಬದುಕ್ಕುತ್ತಿದ್ದ ರೈತರು ಕಂಗಾಲಾಗಿದ್ದು ಪರಿಹಾರಕ್ಕೆ ಒತ್ತಾಯಿಸಿದ್ದಾರೆ.