ಅರ್ಧ ರಾಜ್ಯ ಮತ್ತೆ ಲಾಕ್-ಡೌನ್ ??
ಬೆಂಗಳೂರು, ಜುಲೈ 13: ರಾಜ್ಯದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಹಾಗಾಗಿ ಈಗಾಗಲೇ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ಒಂದು ವಾರದ ಲಾಕ್ ಡೌನ್ ಘೋಷಿಸಲಾಗಿದೆ. ಅಷ್ಟೇ ಅಲ್ಲ ರಾಜ್ಯದ ಇತರ ಜಿಲ್ಲೆಗಳಲ್ಲಿ ಕೂಡ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಿರುವ ಹಿನ್ನಲೆಯಲ್ಲಿ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಾಕ್ ಡೌನ್ ಅನ್ನು ಇನ್ನಿತರ ಜಿಲ್ಲೆಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಜನಪ್ರತಿನಿಧಿಗಳು ಸೋಂಕು ಪ್ರಕರಣಗಳು ಏರಿಕೆ ಕಂಡಿರುವ ಹಿನ್ನಲೆಯಲ್ಲಿ ಮತ್ತೆ ಲಾಕ್ಡೌನ್ ಜಾರಿಗೆ ಒತ್ತಡ ಹೇರಿದ್ದು, ಸರ್ಕಾರ ಇದಕ್ಕೆ ಒಪ್ಪಿಗೆ ಸೂಚಿಸಿದಲ್ಲಿ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳ ಜೊತೆಗೆ ಅರ್ಧ ರಾಜ್ಯ ಮತ್ತೆ ಲಾಕ್ಡೌನ್ಗೆ ಒಳಪಡಲಿದೆ.
ಈ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ಎಸ್ಪಿಗಳ ಅಭಿಪ್ರಾಯ ಪಡೆದು, ಮುಖ್ಯ ಕಾರ್ಯದರ್ಶಿ ಜತೆ ವಿಚಾರ ವಿನಿಮಯ ಮಾಡಿ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚಿಂತನೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11ಕ್ಕೆ ಹೆಚ್ಚು ಸೋಂಕುಬಾಧಿತ ಜಿಲ್ಲೆಗಳು ಮತ್ತು ಸಂಜೆ 4ಕ್ಕೆ ಉಳಿದ ಜಿಲ್ಲೆಗಳೊಂದಿಗೆ ವಿಡಿಯೋ ಸಂವಾದ ಗೊತ್ತುಪಡಿಸಲಾಗಿದ್ದು, ಡಿಸಿ, ಸಿಇಒ, ಎಸ್ಪಿಗಳೊಂದಿಗೆ ಬಿಎಸ್ವೈ 2 ಹಂತದಲ್ಲಿ ವಿಡಿಯೋ ಸಂವಾದ ನಡೆಸಲಿದ್ದಾರೆ.
ಭಾನುವಾರ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಕೊರೋನಾ ನಿಯಂತ್ರಣಕ್ಕೆ ಸಂಬಂಧಿಸಿ ಎರಡು ವಿಭಿನ್ನ ಕಾರ್ಯತಂತ್ರಗಳು ಹಾಗೂ ಮಾರ್ಗಸೂಚಿಯನ್ನು ಅಂತಿಮಗೊಳಿಸಲಾಗಿದೆ. ವಿಡಿಯೋ ಸಂವಾದದಲ್ಲಿ ಸಂಗ್ರಹಿಸಿದ ಅಭಿಪ್ರಾಯ ಹಾಗೂ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಜತೆ ಸಮಾಲೋಚನೆ ನಡೆಸಿದ ಬಳಿಕ ಮುಖ್ಯಮಂತ್ರಿಗಳು ಅದನ್ನು ಬಿಡುಗಡೆ ಮಾಡಲಿದ್ದಾರೆ ಎಂದು ಹೇಳಲಾಗಿದೆ.
ಲಾಕ್ಡೌನ್ ಮಾಡಲು ಸರ್ಕಾರ ಒಪ್ಪಿಗೆ ಸೂಚಿಸಿದರೆ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಗದಗ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಿಗೆ ಲಾಕ್ ಡೌನ್ ವಿಸ್ತರಣೆಗೊಳ್ಳಲಿದೆ. ಕಡಿಮೆ ಕೊರೊನಾ ಪ್ರಕರಣಗಳಿರುವ ಉಳಿದ ಜಿಲ್ಲೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸುವ ಸಾಧ್ಯತೆಗಳಿವೆ.