ಹಂಸಲೇಖ ಅವರ ಮರಳುವಿಕೆ ಬಗ್ಗೆ ರಾಘವೇಂದ್ರ ಹುಣಸೂರ್ ಮಾತು..!
ಬೆಂಗಳೂರು: ನಾದಬ್ರಹ್ಮ ಹಂಸಲೇಖ ಅವರು ಪೇಜಾವರ ಶ್ರೀಗಳ ಬಗ್ಗೆ ನೀಡಿದ ಹೇಳಿಕೆಯಿಂದ ಅವರು ಸ್ವಲ್ಪ ವಿವಾದದಲ್ಲಿ ಸಿಲುಕಿದ್ದಾರೆ.. ಹಂಸಲೇಖ ಪರ ಅನೇಕರು ಬೆಂಬಲಿಸಿದ್ರೆ, ಅನೇಕರು ಅವರ ವಿರುದ್ಧ ಆಕ್ರೋಶಗಳನ್ನೂ ಹೊರಹಾಕಿದ್ದು, ಅವರ ವಿರುದ್ಧ ದೂರುಗಳು ದಾಖಲಾಗಿದೆ.. ಈ ನಡುವೆ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ರಿಯಾಲಿಟಿ ಶೋ ಸರಿಗಮಪ ಕಾರ್ಯಕ್ರಮದಲ್ಲಿ ಮುಂದಿನ ವಾರದಿಂದ ಹಂಸಲೇಖ ಅವರು ಮತ್ತೆ ಭಾಗಿಯಾಗಲಿದ್ದಾರೆ ಎಂದು ರಾಘವೇಂದ್ರ ಹುಣಸೂರು ಅವರು ತಿಳಿಸಿದ್ದಾರೆ.
ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಒಂದು ವಾರ ಹೊಗುಳಿಯಲು ನಿರ್ಧರಿಸಿದರು. ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ ಎಂದು ತಿಳಿಸಿದ್ದಾರೆ. ಕೆಲವು ದಿನಗಳ ಹಿಂದೆ ಮೈಸೂರಿನ ಮಾನಸಗಂಗೋತ್ರಿಯಲ್ಲಿಯಲ್ಲಿ ನಡೆದಿದ್ದ ಪ್ರಶಸ್ತಿ ಸಮಾರಂಭವೊಂದರ ಕಾರ್ಯಕ್ರಮದಲ್ಲಿ ಹಂಸಲೇಖ ಅವರು, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗಿ ಕುಳಿತುಕೊಂಡು ಬಂದಿದ್ದಾರೆ. ಆದರೆ ದಲಿತರು ಕೋಳಿ ಕೊಟ್ರೆ ತಿಂತಾರಾ? ಕುರಿ ರಕ್ತ ಪ್ರೈ ಮಾಡಿ ಕೊಟ್ರೆ ತಿಂತಾರಾ. ಲಿವರ್ ಕೊಟ್ರೆ ತಿಂತಾರಾ? ದಲಿತರ ಮನೆಗೆ ಹೋಗುವುದು ದೊಡ್ಡ ವಿಷಯ ಅಲ್ಲ, ತಮ್ಮ ಮನೆಗೆ ಕರೆದುಕೊಂಡು ಹೋಗಿ ಅವರು ತಿಂದ ಲೋಟ, ತಟ್ಟೆ ತೊಳೆಯೋದು ದೊಡ್ಡ ವಿಷಯ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಪೇಜಾವರ ಶ್ರೀಗಳ ವಿರುದ್ಧ ಹಂಸಲೇಖ ಅವರು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಈ ನಡುವೆ ಹಂಸಲೇಖ ಅವರ ಆರೋಗ್ಯದಲ್ಲಿ ಏರುಪೇರಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿತ್ತು. ಈ ಬಗ್ಗೆ ಹಂಸಲೇಖ ಅವರು ತಮ್ಮ ಆರೋಗ್ಯ ಕ್ಷೇಮವಾಗಿದ್ದು, ಯಾರು ಭಯ ಪಡುವ ಅಗತ್ಯವಿಲ್ಲ. ಸರ್ಕಾರ ಎಲ್ಲ ರೀತಿಯ ಭದ್ರತೆಯನ್ನು ನೀಡಿದೆ ಹಾಗೂ ಲಕ್ಷಾಂತರ ಅಭಿಮಾನಿಗಳು ನನಗೆ ಧೈರ್ಯ ತುಂಬಿದ್ದಾರೆ ಎಂದು ತಿಳಿಸಿದ್ದರು.