ರಾಯ್‌ಪುರ: ಕ್ರಿಕೆಟ್ ಜಗತ್ತಿನಲ್ಲಿ ಒಂದು ಮಾತಿದೆ, ಕ್ಯಾಚ್ ಡ್ರಾಪ್ ಆದರೆ ಮ್ಯಾಚ್ ಡ್ರಾಪ್ ಎಂದು. ರಾಯ್‌ಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ಟೀಮ್ ಇಂಡಿಯಾ ನೀಡಿದ್ದ 359 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ, ಐಡೆನ್ ಮಾರ್ಕ್ರಾಮ್ ಅವರ ಸಿಡಿಲಬ್ಬರದ ಶತಕದ ನೆರವಿನಿಂದ ಭಾರತದ ಕೈಯಲ್ಲಿದ್ದ ಗೆಲುವನ್ನು ಕಸಿದುಕೊಂಡಿದೆ.
ಬೃಹತ್ ಮೊತ್ತ ಕಲೆಹಾಕಿದರೂ ಭಾರತಕ್ಕೆ ನಿರಾಸೆ
ಟಾಸ್ ಸೋತರೂ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ್ದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ ಎದುರಾಳಿಗೆ ಕಠಿಣ ಸವಾಲನ್ನೇ ನೀಡಿತ್ತು. ಆದರೆ, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಮಾಡಿದ ಎಡವಟ್ಟುಗಳು ಭಾರತಕ್ಕೆ ಮುಳುವಾದವು. 359 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ, ಕೇವಲ 49.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಕಲೆಹಾಕಿ 4 ವಿಕೆಟ್ ಅಂತರದ ರೋಚಕ ಜಯ ಸಾಧಿಸಿತು.
ಜೈಸ್ವಾಲ್ ಮಾಡಿದ ಆ ಒಂದು ತಪ್ಪು!
ಪಂದ್ಯದ ಗತಿಯನ್ನೇ ಬದಲಿಸಿದ್ದು ಯಶಸ್ವಿ ಜೈಸ್ವಾಲ್ ಮಾಡಿದ ಫೀಲ್ಡಿಂಗ್ ಎಡವಟ್ಟು. ಹರಿಣಗಳ ಪಡೆಯ ಪ್ರಮುಖ ಬ್ಯಾಟರ್ ಐಡೆನ್ ಮಾರ್ಕ್ರಾಮ್ 53 ರನ್ ಗಳಿಸಿ ಆಡುತ್ತಿದ್ದಾಗ, ಲಾಂಗ್-ಆನ್ ಬೌಂಡರಿಯಲ್ಲಿ ಸುಲಭದ ಕ್ಯಾಚ್ ನೀಡಿದ್ದರು. ಆದರೆ, ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್ ಚೆಂಡನ್ನು ಹಿಡಿಯುವಲ್ಲಿ ವಿಫಲರಾದರು. ಇದೇ ಜೀವದಾನವನ್ನು ಬಳಸಿಕೊಂಡ ಮಾರ್ಕ್ರಾಮ್, ಭಾರತದ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು.
ಮಾರ್ಕ್ರಾಮ್ ಅಬ್ಬರದ ಶತಕ
ಜೈಸ್ವಾಲ್ ನೀಡಿದ ಜೀವದಾನದ ನಂತರ ಮಾರ್ಕ್ರಾಮ್ ಅವರ ಆಟದ ಸ್ವರೂಪವೇ ಬದಲಾಯಿತು. ಆರಂಭದಲ್ಲಿ ಕ್ರೀಸ್ ಗೆ ಹೊಂದಿಕೊಳ್ಳಲು ಪರದಾಡಿದ್ದ ಅವರು, ನಂತರ ರುದ್ರನರ್ತನಗೈದರು. ಕೇವಲ 98 ಎಸೆತಗಳನ್ನು ಎದುರಿಸಿದ ಮಾರ್ಕ್ರಾಮ್, ಬರೋಬ್ಬರಿ 10 ಬೌಂಡರಿ ಹಾಗೂ 4 ಆಕಾಶದೆತ್ತರದ ಸಿಕ್ಸರ್ ಗಳ ನೆರವಿನಿಂದ 110 ರನ್ ಸಿಡಿಸಿದರು. ಇದು ಏಕದಿನ ಕ್ರಿಕೆಟ್ ನಲ್ಲಿ ಅವರ 4ನೇ ಶತಕವಾಗಿದ್ದು, ಭಾರತದ ವಿರುದ್ಧ ಆರಂಭಿಕ ಆಟಗಾರನಾಗಿ ದಾಖಲಿಸಿದ ಚೊಚ್ಚಲ ಶತಕವಾಗಿದೆ.
ಅಂತಿಮವಾಗಿ ಹರ್ಷಿತ್ ರಾಣಾ ಬೌಲಿಂಗ್ ನಲ್ಲಿ ಮಾರ್ಕ್ರಾಮ್ ಔಟಾದರಾದರೂ, ಅಷ್ಟರಲ್ಲಾಗಲೇ ಅವರು ತಂಡವನ್ನು ಗೆಲುವಿನ ದ್ವಾರಕ್ಕೆ ತಂದು ನಿಲ್ಲಿಸಿದ್ದರು.
ಕೇವಲ ಮಾರ್ಕ್ರಾಮ್ ಮಾತ್ರವಲ್ಲದೆ, ದಕ್ಷಿಣ ಆಫ್ರಿಕಾದ ಇತರ ಬ್ಯಾಟರ್ ಗಳು ಕೂಡ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಮ್ಯಾಥ್ಯೂ ಬ್ರೀಟ್ಜ್ಕೆ 68 ರನ್, ಡೆವಾಲ್ಡ್ ಬ್ರೇವಿಸ್ 54 ರನ್ ಮತ್ತು ನಾಯಕ ಬವುಮಾ ಸಮಯೋಚಿತ 46 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಭಾರತ ತಂಡ ಬ್ಯಾಟಿಂಗ್ ನಲ್ಲಿ ಪರಾಕ್ರಮ ಮೆರೆದರೂ, ನಿರ್ಣಾಯಕ ಹಂತದಲ್ಲಿ ಕೈಚೆಲ್ಲಿದ ಕ್ಯಾಚ್ ಪಂದ್ಯದ ಫಲಿತಾಂಶವನ್ನೇ ಬದಲಿಸಿತು. ಈ ಸೋಲು ಟೀಮ್ ಇಂಡಿಯಾದ ಫೀಲ್ಡಿಂಗ್ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎತ್ತುವಂತೆ ಮಾಡಿದೆ.








