ಹ್ಯಾಪಿ ಬರ್ತ್ ಡೇ ಕೂಲ್ ಕ್ಯಾಪ್ಟನ್.. ಮಹೇಂದ್ರ ಸಿಂಗ್ ಧೋನಿ..!
ಆ ಒಂದು ಹೆಸರು… ಭಾರತೀಯ ಕ್ರಿಕೆಟ್ ರಂಗಕ್ಕೆ ಹೊಸ ಆಯಾಮ ರೂಪಿಸಿದ್ದ ಹೆಸರು..
ಆ ಒಂದು ಹೆಸರು… ಕೋಟಿ ಕೋಟಿ ಅಭಿಮಾನಿಗಳಿಗೆ ಸ್ಪೂರ್ತಿ ತುಂಬಿದ ಹೆಸರು..
ಆ ಒಂದು ಹೆಸರು… ವಿಶ್ವ ಕ್ರಿಕೆಟ್ ನಲ್ಲಿ ಯಾರು ಅಳಿಸಲಾಗದಂತಹ ಶಾಶ್ವತವಾದ ಹೆಸರು…
ಆ ಒಂದು ಹೆಸರು… ಯುವ ಕ್ರಿಕೆಟಿಗರಿಗೆ ಮತ್ತು ಯುವ ನಾಯಕರಿಗೆ ದಾರಿದೀಪವಾಗುವ ಹೆಸರು
ಆ ಒಂದು ಹೆಸರು… ನೋಡಿದ ತಕ್ಷಣವೇ ಪ್ರತಿಯೊಬ್ಬರ ನಾಲಗೆ ಮೇಲೆ ನಲಿದಾಡುತ್ತಿರುವ ಹೆಸರು…
ಆ ಹೆಸರೇ… ಮಹೇಂದ್ರ ಸಿಂಗ್ ಧೋನಿ…
ಎಂ.ಎಸ್. ಧೋನಿ.. ಇದು ಬರೀ ಹೆಸರು ಅಲ್ಲ.. ಯಾಕಂದ್ರೆ ಆ ಹೆಸರಲ್ಲಿದೆ ಅಷ್ಟೊಂದು ಆಗಾಧವಾದ ಶಕ್ತಿ… ಅದರಲ್ಲಿದೆ ಯಾರು ಊಹಿಸದ ಯುಕ್ತಿ… ಆ ಹೆಸರಿನಿಂದಲೇ ಸಿಗುತ್ತಿದೆ ಸದಾ ಸ್ಫೂರ್ತಿ… ಕ್ರಿಕೆಟ್ ಅಭಿಮಾನಿಗಳಿಗೆ ಆ ಹೆಸರಿನ ಮೇಲಿದೆ ಅಚ್ಚಳಿಯದ ಪ್ರೀತಿ… ವಿಶ್ವ ಕ್ರಿಕೆಟ್ ನಲ್ಲಿ ಈಗಲೂ ಪ್ರಜ್ವಲಿಸುತ್ತಿದೆ ಆ ಹೆಸರಿನ ಕೀರ್ತಿ.
ಜುಲೈ 7… ಜೆರ್ಸಿ ನಂಬರ್ -7…ನಂಬರ್ -7… ಇದು ಮಹೇಂದ್ರ ಸಿಂಗ್ ಧೋನಿಯವರ ಟ್ರೇಡ್ ಮಾರ್ಕ್. ಮಾಡೆಲ್ ನಂಬರ್ 1981. ಅಂದ್ರೆ ಈಗ 40ರ ಪ್ರಾಯ. ಜುಲೈ 7ರಂದು ಮಹೇಂದ್ರ ಸಿಂಗ್ ಧೋನಿ ಹುಟ್ಟಿದ ದಿನ.
ಟೀಮ್ ಇಂಡಿಯಾದ ಗರ್ಭಗುಡಿ ಪ್ರವೇಶಿಸಿ ಸುಮಾರು 15 ವರ್ಷಗಳ ಕಾಲ ಕ್ರಿಕೆಟ್ ಜಗತ್ತಿನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದರು.
ಗೂಟ ರಕ್ಷಕನಾಗಿ ಟೀಮ್ ಇಂಡಿಯಾವನ್ನು ಸೇರಿಕೊಂಡ ಎಂಎಸ್ ಡಿ, ಸ್ಫೋಟಕ ಬ್ಯಾಟಿಂಗ್ ಮೂಲಕವೂ ಮಿಂಚು ಹರಿಸಿದ್ರು. ಟೀಮ್ ಇಂಡಿಯಾವನ್ನು ಸೇರಿ ಮೂರೇ ಮೂರು ವರ್ಷದಲ್ಲಿ ನಾಯಕನಾಗಿ ಬಡ್ತಿ ಪಡೆದ ಧೋನಿ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಟ್ರೋಫಿಯನ್ನು ಗೆದ್ದು ಇತಿಹಾಸ ಬರೆದ್ರು.
ನಂತರ ಏಕದಿನ ಮತ್ತು ಟೆಸ್ಟ್ ತಂಡದ ನಾಯಕನಾಗಿ ಟೀಮ್ ಇಂಡಿಯಾವನ್ನು ಯಶಸ್ವಿನ ಅಲೆಯಲ್ಲಿ ತೇಲಾಡಿಸಿದ್ರು. 2011ರ ವಿಶ್ವಕಪ್ ಫೈನಲ್ ನಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿದ್ರು. ಗೆಲುವಿನ ರನ್ ಗಾಗಿ ಆಕರ್ಷಕ ಸಿಕ್ಸರ್ ಸಿಡಿಸಿದ್ರು. ಆಗಸದೆತ್ತರದಲ್ಲಿ ಹಾರಾಡುತ್ತಿದ್ದ ಚೆಂಡು ಸೀದಾ ಪ್ರೇಕ್ಷಕರ ಗ್ಯಾಲರಿಯತ್ತ ಬೀಳುತ್ತಿದ್ದ ಕ್ಷಣವನ್ನು ತನ್ನ ತೀಕ್ಷ್ಣ ಕಣ್ಣಿನಿಂದಲೇ ನೋಡುತ್ತಿದ್ದ ಆ ಕ್ಷಣವಂತೂ ಅಬ್ಬಾ… ಅದನ್ನು ಅಂತೂ ಮರೆಯಲೂ ಸಾಧ್ಯವಿಲ್ಲ. ಬ್ಯಾಟ್ ಅನ್ನು ಗದೆಯಂತೆ ತಿರುಗಿಸಿಕೊಂಡು ಗೆಲುವಿನ ಸಂಭ್ರಮವನ್ನು ಆಚರಿಸಿಕೊಂಡಿದ್ದರು. ಧೋನಿಯನ್ನು ನೆನಪಿಸಿಕೊಂಡಾಗ ಒಂದು ಕ್ಷಣ ಆ ದೃಶ್ಯ ಕಣ್ಣ ಮುಂದೆ ಹಾದು ಹೋಗುತ್ತೆ.
ಇನ್ನು ಐಪಿಎಲ್ನಲ್ಲಂತೂ ಧೋನಿಯ ಮ್ಯಾಜಿಕ್ ಅನ್ನು ಕೇಳುವುದೇ ಬೇಡ. ತನ್ನ ಸ್ಫೊಟಕ ಆಟ, ಚಾಣಕ್ಯ ನಾಯಕತ್ವ, ತಾಳ್ಮೆಯಿಂದಲೇ ಎಲ್ಲವನ್ನು ಸಹಿಸಿಕೊಂಡು ತಂಡವನ್ನು ಮುನ್ನಡೆಸುವ ರೀತಿ, ಕ್ಷಣ ಮಾತ್ರದಲ್ಲೇ ಪಂದ್ಯದ ಗತಿಯನ್ನು ಅರಿತುಕೊಳ್ಳುವ ಮಾಸ್ಟರ್ ಮೈಂಡ್, ಆಟದ ಜೊತೆ ಫ್ಯಾಷನ್, ಪ್ಯಾಷನ್, ಸ್ಟೈಲ್, ದೇಶಾಭಿಮಾನ… ಸೈನಿಕರ ಮೇಲಿನ ಗೌರವ ಹೀಗೆ ಮುಗುಳುನಗೆಯಿಂದಲೇ ಎಲ್ಲರನ್ನು ಸೂಜಿಗಲ್ಲಿನಂತೆ ಆಕರ್ಷಿಸುವ ವ್ಯಕ್ತಿತ್ವದಿಂದ ಧೋನಿ ಮನೆ ಮನೆ ಮಾತಾಗಿದ್ದಾರೆ.
ಧೋನಿ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದಾರೆ. ಸದ್ಯ ಐಪಿಎಲ್ ನಲ್ಲಿ ಆಡುತ್ತಿದ್ದಾರೆ. ಆದ್ರೂ ಧೋನಿಯ ಹವಾ ಮಾತ್ರ ಇನ್ನೂ ಕಮ್ಮಿಯಾಗಿಲ್ಲ. ಅಪಾಯಕಾರಿ ಬ್ಯಾಟ್ಸ್ ಮೆನ್.. ಅಷ್ಟೇ ಅಲ್ಲ ಗೇಮ್ ಚೇಂಜರ್ ಕೂಡ ಹೌದು. ಗ್ರೇಟ್ ಫಿನೀಷರ್ ಆಗಿರುವ ಧೋನಿಯ ಬ್ಯಾಟಿಂಗ್ ವೈಭವ ಸ್ವಲ್ಪ ಮಟ್ಟಿಗೆ ಕಮ್ಮಿಯಾಗಿದೆ. ಆದ್ರೂ ಅಭಿಮಾನಿಗಳ ಪ್ರೀತಿ ಅಭಿಮಾನ ಮಾತ್ರ ಒಂಚೂರು ಕಡಿಮೆಯಾಗಿಲ್ಲ.
ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನಂತರ ಧೋನಿ ತನ್ನೂರಿನ ತೋಟದ ಮನೆಯಲ್ಲಿ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಜೊತೆಗೆ ಪಕ್ಕಾ ರೈತನಾಗಿದ್ದಾರೆ. ತನ್ನದೇ ತೋಟದಲ್ಲಿ ಉಳುಮೆ ಮಾಡಿಕೊಂಡು ರೈತರಿಗೂ ಮಾದರಿಯಾಗುತ್ತಿದ್ದಾರೆ.
ಒಟ್ಟಿನಲ್ಲಿ ಮಹೇಂದ್ರ ಸಿಂಗ್ ಧೋನಿಯವರದ್ದು ವರ್ಣರಂಜಿತ ಬದುಕು. ದೇಶ, ಸೇನೆಯ ವಿಚಾರದಲ್ಲಿ ಧೋನಿ ಒಂದು ಹೆಜ್ಜೆ ಮುಂದೇನೇ ಇರುತ್ತಾರೆ. ಬಿಡುವಿನ ವೇಳೆಯಲ್ಲಿ ಸೈನಿಕರ ಜೊತೆ ಕಾಣಿಸಿಕೊಳ್ಳುತ್ತಾರೆ. ಹಾಗೇ ತೋಟದಲ್ಲಿ ಕೆಲಸ ಮಾಡುತ್ತಾರೆ. ಕ್ರಿಕೆಟ್ ವಿಚಾರಕ್ಕೆ ಬಂದಾಗ ಐಪಿಎಲ್ ನಲ್ಲಿ ಆಡುತ್ತಾರೆ. ಜೊತೆ ಜೊತೆಗೆ ಜಾಹಿರಾತು, ಬಿಸಿನೆಸ್, ಫ್ಯಾಮಿಲಿ, ಬೈಕ್ ಸವಾರಿ, ಹೀಗೆ ಎಲ್ಲಾ ರಂಗದಲ್ಲೂ ಧೋನಿ ಹೆಜ್ಜೆಯನ್ನಿಟ್ಟುಕೊಂಡು ಎಲ್ಲರಿಗೂ ಮಾದರಿಯಾಗುತ್ತಿದ್ದಾರೆ.
ಇದೀಗ 40ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಮಹೇಂದ್ರ ಸಿಂಗ್ ಧೋನಿಯವರಿಗೆ ಹುಟ್ಟು ಹಬ್ಬದ ಶುಭಾಶಯಗಳು.. ಹ್ಯಾಪಿ ಬರ್ತ್ಡೇ ಧೋನಿ…