ಲಕ್ನೋ: ಪೊಲೀಸ್ ಪೇದೆಯೊಬ್ಬ(Police Constable) ಉತ್ತರ ಪ್ರದೇಶ (Uttar Pradesh) ವಿದ್ಯಾರ್ಥಿನಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ (Harassment) ನೀಡಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ (Social Media)ವೈರಲ್ ಆಗಿದ್ದು, ಈ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ವಿಡಿಯೋದಲ್ಲಿ ಪೊಲೀಸ್ ಪೇದೆಯನ್ನು ಶಹದತ್ ಅಲಿ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ವಿದ್ಯಾರ್ಥಿನಿಯನ್ನು ಹಿಂಬಾಲಿಸುತ್ತಿದ್ದ ದಾರಿಯಲ್ಲಿ ಮಹಿಳೆಯೊಬ್ಬರು ಹೋಗುತ್ತಿದ್ದು, ಕಿರುಕುಳ ನೀಡುವುದನ್ನು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ವಿದ್ಯಾರ್ಥಿನಿಯೊಬ್ಬಳು ತನ್ನ ಸೈಕಲ್ನಲ್ಲಿ ಹೋಗುತ್ತಿದ್ದಾಗ ಪೊಲೀಸ್ ಪೇದೆ ತನ್ನ ಸ್ಕೂಟರ್ನಲ್ಲಿ ಆಕೆಯನ್ನು ಹಿಂಬಾಲಿಸುವ ದೃಶ್ಯ ಮೊಬೈಲ್ನಲ್ಲಿ ಸೆರೆಹಿಡಿಯಲಾಗಿದೆ.
ಆತನ ಚಲನವಲನಗಳನ್ನು ಗಮನಿಸಿದ ಮಹಿಳೆ ಮತ್ತು ಇನ್ನೋರ್ವ ವ್ಯಕ್ತಿ ಕೋಪಗೊಂಡು ಪೊಲೀಸ್ ಪೇದೆಯನ್ನು ತಡೆದು ಬಾಲಕಿಯನ್ನು ಏಕೆ ಹಿಂಬಾಲಿಸುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ನೀವು ಯಾರು? ನಿಮಗೆ ಆಕೆ ಗೊತ್ತಾ ಎಂದು ಕೇಳಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸ್ ಪೇದೆಯು ಈಕೆ ತನ್ನ ಮಗುವಿನ ಸಹಪಾಠಿ ಎಂದು ಹೇಳಿಕೊಂಡಿದ್ದಾನೆ. ಆಗ ಮಹಿಳೆ ಮಗುವಿನ ಶಾಲೆಯ ಹೆಸರನ್ನು ಹೇಳುವಂತೆ ಸೂಚಿಸಿದ್ದಾಳೆ. ಈ ಸಂದರ್ಭದಲ್ಲಿ ಆತ ತಪ್ಪಾಗಿ ಹೇಳಿ, ಸಿಕ್ಕಿ ಬಿದ್ದಿದ್ದಾನೆ.
ಪೇದೆಯ ಸ್ಕೂಟರ್ನಲ್ಲಿ ನಂಬರ್ ಪ್ಲೇಟ್ ಇಲ್ಲದಿರುವುದನ್ನು ಗಮನಿಸಿದ ಮಹಿಳೆ, ನಂಬರ್ ಪ್ಲೇಟ್ ಏಕಿಲ್ಲ ಎಂದು ಪ್ರಶ್ನಿಸಿ ಆತ ಧರಿಸಿದ್ದ ಹೆಲ್ಮೆಟ್ ತೆಗೆಯುವಂತೆ ಸೂಚಿಸಿದ್ದಾಳೆ. ಅದಕ್ಕೆ ಪೊಲೀಸ್ ಪೇದೆ ಇದು ವಿದ್ಯುತ್ ಚಾಲಿತ ವಾಹನವಾಗಿದ್ದು ಇದಕ್ಕೆ ನಂಬರ್ ಪ್ಲೇಟ್ ಇರುವುದಿಲ್ಲ ಎಂದು ಹೇಳಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ಗಮನಿಸಿದ ಲಕ್ನೋ (Lucknow) ಪೊಲೀಸರು ಆತನನ್ನು ಅಮಾನತು (Suspend) ಮಾಡಿದ್ದಾರೆ.