ನಾನು ನೂರು ಟೆಸ್ಟ್ ಪಂದ್ಯಗಳನ್ನು ಆಡಲು ನಾಯಕ ಸೌರವ್ ಗಂಗೂಲಿಯೇ ಕಾರಣ – ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್ ಟೀಮ್ ಇಂಡಿಯಾ ಆಟಗಾರ. ದೂಸ್ರಾ ಎಸೆತಗಳ ಮೂಲಕವೇ ಎದುರಾಳಿ ಬ್ಯಾಟ್ಸ್ ಮೆನ್‍ಗಳನ್ನು ದಂಗುಬಡಿಸುತ್ತಿದ್ದ ಸ್ಪಿನ್ ಮಾತ್ರಿಕ. ಹಾಗೇ ಹರ್ಭಜನ್ ಸಿಂಗ್ ಹಲವಾರು ನಾಯಕರ ಜೊತೆ ಆಟವಾಡಿದ್ದಾರೆ. ಮಹಮ್ಮದ್ ಅಜರುದ್ದೀನ್ ನಾಯಕತ್ವದಲ್ಲಿ ಟೀಮ್ ಇಂಡಿಯಾಗೆ ಎಂಟ್ರಿಯಾದ ಹರ್ಭಜನ್, ಗಂಗೂಲಿ ನಾಯಕತ್ವದಲ್ಲಿ ತಂಡದ ಖಾಯಂ ಆಟಗಾರನಾಗಿದ್ದರು.
ಬಳಿಕ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ 2007ರ ವಿಶ್ವಕಪ್‍ನಲ್ಲೂ ಭಾಗಿಯಾಗಿದ್ದರು. ಆನಂತರ ಧೋನಿ ನಾಯಕತ್ವದಲ್ಲಿ ಟಿ-ಟ್ವೆಂಟಿ ಹಾಗೂ 2011ರ ಏಕದಿನ ವಿಶ್ವಕಪ್ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. ಅನಿಲ್ ಕುಂಬ್ಳೆ , ಸಚಿನ್ ನಾಯಕತ್ವದಲ್ಲೂ ಆಡಿದ್ದರು. ಹಾಗೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಾಯಕತ್ವದಲ್ಲೂ ಆಡಿದ್ದಾರೆ.
ಆದ್ರೆ ಹರ್ಭಜನ್ ಸಿಂಗ್ ಸದಾ ನೆನಪಿನಲ್ಲಿ ಇಟ್ಟುಕೊಳ್ಳುವ ನಾಯಕ ಅಂದ್ರೆ ಸೌರವ್ ಗಂಗೂಲಿ. ಸೌರವ್ ಗಂಗೂಲಿ ಹರ್ಭಜನ್ ಸಿಂಗ್ ಅವರ ಕ್ರಿಕೆಟ್ ಬದುಕಿನ ಮೇಲೆ ಗಾಢವಾದ ಪರಿಣಾಮ ಬೀರಿದ್ದಾರೆ. ಸೌರವ್ ಗಂಗೂಲಿ ಬೆಂಬಲ ಇಲ್ಲದೇ ಇರುತ್ತಿದ್ರೆ ನಾನು ಇವತ್ತು ನೂರು ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಾಗುತ್ತಿಲ್ಲ. ಹಾಗೇ ನಾನು ಯಾವುದೇ ಭಯವಿಲ್ಲದೇ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆ ಮಟ್ಟದಲ್ಲಿ ಸೌರವ್ ಗಂಗೂಲಿ ನನ್ನ ಮೇಲೆ ಪ್ರಭಾವ ಬೀರಿದ್ದಾರೆ ಅಂತ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಒಂದು ಹಂತದಲ್ಲಿ ನನಗೆ ಏನು ಆಗುತ್ತಿದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಯಾರನ್ನು ನಂಬಬೇಕು ಎಂಬ ಗೊಂದಲಗಳಿದ್ದವು. ನನ್ನ ಜೊತೆ ಯಾರಿದ್ದಾರೆ, ಯಾರು ಇಲ್ಲ ಎಂಬುದೇ ನನಗೆ ತಿಳಿಯುತ್ತಿರಲಿಲ್ಲ. ಕೆಲವರು ನನ್ನ ಎದುರಿಗೆ ನಾವಿದ್ದೇವೆ ಅಂತ ಹೇಳುತ್ತಿದ್ದರು. ಆದ್ರೆ ನಂತರ ಯಾರು ನನ್ನ ಜೊತೆಗಿರುತ್ತಿರಲಿಲ್ಲ. ಆಗ ನನ್ನ ನೆರವಿಗೆ ಬಂದಿದ್ದು ಸೌರವ್ ಗಂಗೂಲಿ ಅಂತ ಹೇಳ್ತಾರೆ ಹರ್ಭಜನ್ ಸಿಂಗ್.
ಇನ್ನು, ಆಯ್ಕೆಗಾರರು ಕೂಡ ನನ್ನ ವಿರುದ್ಧವೇ ಇದ್ರು. ಅದನ್ನು ನಾನು ಬಹಿರಂಗಪಡಿಸುವುದಿಲ್ಲ. ಆಗ ಗಂಗೂಲಿ ನನಗೆ ಸಹಾಯ ಮಾಡಿದ್ದರು. ಅವರು ಆಗ ನಾಯಕನಾಗದೇ ಇರುತ್ತಿದ್ರೆ ಬೇರೆ ಯಾವ ನಾಯಕನೂ ಆ ರೀತಿ ಸಹಾಯ ಮಾಡುತ್ತಿದ್ರೋ ಇಲ್ವೋ ಎಂಬುದು ಗೊತ್ತಿಲ್ಲ. ನಾನು ಇವತ್ತು ಏನು ಆಗಿದ್ದೇನೋ ಅದಕ್ಕೆ ಕಾರಣ ಗಂಗೂಲಿ ಎಂದು ಹರ್ಭಜನ್ ಸಿಂಗ್ ಅವರು ಗಂಗೂಲಿ ತನ್ನ ಮೇಲೆ ಎಷ್ಟು ಪ್ರಭಾವ ಬೀರಿದ್ದರು ಎಂಬುದನ್ನು ಹೇಳಿಕೊಂಡ್ರು.
ಹಾಗೇ ಗಂಗೂಲಿ ನನ್ನನ್ನು ಅಂಜಿಕೆ, ಭಯವಿಲ್ಲದೇ ಬೌಲಿಂಗ್ ಮಾಡಲು ಸಾಕಷ್ಟು ಬೆಂಬಲ ನೀಡಿದ್ದರು.
ಅವರು ನನಗೆ ಸಂಪೂರ್ಣವಾದ ಸ್ವಾತಂತ್ರ್ಯವನ್ನು ನೀಡಿದ್ದರು. ಅಷ್ಟೇ ಅಲ್ಲ, ನಾಯಕನಾಗಿ, ಕ್ರಿಕೆಟಿಗನಾಗಿ, ಆಟಗಾರನಾಗಿ ನನಗೆ ಆತ್ಮವಿಶ್ವಾಸವನ್ನು ತುಂಬುತ್ತಿದ್ದರು. ಫೀಲ್ಡಿಂಗ್ ಸೆಟ್ ಮಾಡುವಾಗಲೂ ಅಷ್ಟೇ. ಕೆಲವೊಂದು ಬಾರಿ ಬದಲಾವಣೆ ಮಾಡಿಕೊಳ್ಳಬೇಕು ಅಂತ ಅನ್ನಿಸಿದ್ದಾಗ ಗಂಗೂಲಿ ಅದಕ್ಕೆ ಬಿಡುತ್ತಿರಲಿಲ್ಲ. ಬೌಂಡರಿ ಹೊಡೆಯುವುದಾದ್ರೆ ಹೊಡೆಯಲಿ, ರನ್ ಬೇಕಾದ್ರೂ ಹೋಗಲಿ. ನಮಗೆ ವಿಕೆಟ್ ಬೇಕು ಅಷ್ಟೇ. ಇದು ನಮ್ಮ ವಿಶ್ವಾಸವನ್ನು ಇಮ್ಮಡಿಗೊಳಿಸುತ್ತಿತ್ತು ಎಂದು ಭಜ್ಜಿ ಗಂಗೂಲಿಯ ನಾಯಕತ್ವದ ಗುಣಗಳನ್ನು ಸ್ಮರಿಸಿಕೊಂಡ್ರು.








