ಕ್ರಿಕೆಟ್ ನಲ್ಲಿ ದೂಸ್ರಾ ಎಸೆತ ಎಂಬ ಪದ ಬಳಕೆಯಾಗಿದ್ದು ಹೇಗೆ ?
ಹರ್ಭಜನ್ ಸಿಂಗ್.. ಟೀಮ್ ಇಂಡಿಯಾದ ಟರ್ಬನೇಟರ್. ಒಡನಾಡಿಗಳ ಪ್ರೀತಿಯ ಭಜ್ಜಿ… ನೋಡೋಕೆ ಸಣಕಲು ದೇಹ. ಆದ್ರೆ ಮೈಯಲ್ಲಿ ರಕ್ತ ಕುದಿಯುತ್ತಿರುವುದು ಮಾತ್ರ ಪಂಜಾಬ್‍ದ್ದು. ಮಾತಿಗೆ ಮಾತು, ಏಟಿಗೆ ಎದುರೇಟು. ಇದು ಹರ್ಭಜನ್ ಸಿಂಗ್ ಅವರ ಬತ್ತಳಿಕೆಯಲ್ಲಿರುವ ಅಸ್ತ್ರಗಳು. ಆಕ್ರಮಣಕಾರಿ ಪ್ರವೃತ್ತಿಯನ್ನು ಹೊಂದಿರುವ ಹರ್ಭಜನ್ ಸಿಂಗ್ ಕೇವಲ ಬೌಲರ್ ಮಾತ್ರವಲ್ಲ. ಕೆಲವೊಂದು ಬಾರಿ ಬ್ಯಾಟ್ ನ ಮೂಲಕವೂ ಮಿಂಚು ಹರಿಸಿದ್ದಾರೆ.
ಅಂದ ಹಾಗೇ, ಹರ್ಭಜನ್ ಸಿಂಗ್ ಖ್ಯಾತಿ ಪಡೆದಿದ್ದು ತನ್ನ ದೂಸ್ರಾ ಎಸೆತಗಳ ಮೂಲಕ. ದೂಸ್ರಾ ಎಸೆತಗಳಿಂದಲೇ ನಾನು ಟೀಮ್ ಇಂಡಿಯಾಗೆ ಪ್ರವೇಶ ಮಾಡಲು ಸಾಧ್ಯವಾಯ್ತು. ಆಗ ದೂಸ್ರಾ ಎಸೆತಗಳನ್ನು ಹಾಕುವಂತ ಬೌಲರ್‍ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಆದ್ರೆ ನಾನು ಎಲ್ಲರಿಗಿಂತ ಕೊಂಚ ಭಿನ್ನವಾಗಿ ಎಸೆಯುತ್ತಿದ್ದೆ. ನಾನು ಅದನ್ನು ದೂಸ್ರಾ ಎಸೆತ ಅಂತ ಪರಿಗಣಿಸುತ್ತಿರಲಿಲ್ಲ. ಲೆಗ್ ಕಟ್ಟರ್ ಅಂತ ಹೇಳುತ್ತಿದ್ದೆ ಅಂತಾರೆ ಹರ್ಭಜನ್ ಸಿಂಗ್.
ಅಷ್ಟಕ್ಕೂ ಈ ಲೆಗ್ ಕಟ್ಟರ್ ಎಸೆತಗಳಿಗೆ ದೂಸ್ರಾ ಅಂತ ಮೊದಲು ಕರೆದಿದ್ದು ಪಾಕಿಸ್ತಾನದ ವಿಕೆಟ್ ಕೀಪರ್ ಮೋಯಿನ್ ಖಾನ್. ಸಕ್ಲೇನ್ ಮುಷ್ತಾಕ್ ಬೌಲಿಂಗ್ ಮಾಡುತ್ತಿರುವಾಗ ಮೋಯಿನ್
ಖಾನ್ ಅವರು ವಿಕೆಟ್ ಹಿಂದುಗಡೆಯಿಂದ ಸಖ್ಖಿ.. ದೂಸ್ರಾ ಡಾಲ್ ದೇ… ದೂಸ್ರಾ ಡಾಲ್ ದೇ ಅಂತ ಹೇಳುತ್ತಿದ್ದರು. ಹಾಗೇ ಲೆಗ್ ಕಟ್ಟರ್ ಎಸೆತ ದೂಸ್ರಾ ಎಸೆತ ಅಂತ ಖ್ಯಾತಿಯಾಯು ಅಂತ ಹರ್ಭಜನ್ ಸಿಂಗ್ ಹೇಳ್ತಾರೆ.
ವಿಭಿನ್ನವಾಗಿ ಬೌಲಿಂಗ್ ಮಾಡುತ್ತಿದ್ದ ಹರ್ಭಜನ್ ಸಿಂಗ್ ಅವರು 1998ರಲ್ಲಿ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟರು. ಅಷ್ಟಕ್ಕೂ ಹರ್ಭಜನ್ ಸಿಂಗ್ ಅವರು ಟೀಮ್ ಇಂಡಿಯಾಗೆ ಪ್ರವೇಶ ಮಾಡ್ತಾರೆ ಅಂತ 1997ರಲ್ಲೇ ಸಚಿನ್ ತೆಂಡುಲ್ಕರ್ ಭವಿಷ್ಯ ನುಡಿದಿದ್ದರು. ಮೊಹಾಲಿ ಟೆಸ್ಟ್ ಪಂದ್ಯಕ್ಕೂ ಮುನ್ನ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದ ಭಾರತ ತಂಡದ ದೇಬಾಸಿಶ್ ಮೊಹಾಂತಿಗೆ ಹರ್ಭಜನ್ ಸಿಂಗ್ ಬೌಲಿಂಗ್ ಮಾಡಿದ್ದರು. ಮೊಹಾಂತಿ ಅವರು ನಾಲ್ಕೈದು ಬಾರಿ ಹರ್ಭಜನ್ ಸಿಂಗ್‍ಗೆ ಬೌಲ್ಡ್ ಆಗಿದ್ದರು. ಅದನ್ನು ನೋಡಿದ ಅಜೇಯ್ ಜಡೇಜಾ, ಅಝ್ ಭಾಯ್, ಈ ಹುಡುಗನನ್ನು ನೋಡಿ ಅಂದಿದ್ರಂತೆ.
ಆಗ ಭಾರತ ತಂಡದ ನಾಯಕ ಅಜರುದ್ದೀನ್ ಕೂಡ ಹರ್ಭಜನ್ ಸಿಂಗ್ ಅವರ ಬೌಲಿಂಗ್ ಅನ್ನು ಗಮನಿಸುತ್ತಿದ್ದರಂತೆ. ಮತ್ತೊಂದೆಡೆ ಸಚಿನ್ ಆಟದ ಕಡೆಗೆ ಗಮನ ಹರಿಸು, ಭಾರತ ತಂಡದ ಪರ ಆಡುತ್ತಿಯಾ ಅಂತ ನನಗೆ ಭರವಸೆ ಇದೆ, ಆಲ್ ದಿ ಬೆಸ್ಟ್ ಅಂತ ಹೇಳಿದ್ರಂತೆ. ಒಂದು ವರ್ಷದ ನಂತರ ಭಜ್ಜಿ ಟೀಮ್ ಇಂಡಿಯಾಗೆ ಆಯ್ಕೆಯಾದ್ರು. 2001ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊಲ್ಕತ್ತಾದಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದು ಐತಿಹಾಸಿಕ ಪಂದ್ಯದ ಗೆಲುವಿನ ರೂವಾರಿಗಳಲ್ಲಿ ಒಬ್ಬರಾಗಿದ್ರು.








