ಕಟಕ್: ಮೊದಲ ಟಿ20 ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ರುದ್ರತಾಂಡವವಾಡಿದೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಸಮತೋಲಿತ ಪ್ರದರ್ಶನದೊಂದಿಗೆ ಭಾರತ ನೀಡಿದ ಬೃಹತ್ ಮೊತ್ತವನ್ನು ಬೆನ್ನಟ್ಟಲಾಗದೆ ಹರಿಣಗಳ ಪಡೆ ತರಗೆಲೆಗಳಂತೆ ಉದುರಿದ್ದು, ಕೇವಲ 74 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತಕ್ಕೆ 101 ರನ್‌ಗಳ ಐತಿಹಾಸಿಕ ಜಯ ತಂದುಕೊಟ್ಟಿದೆ.
ಬ್ಯಾಟಿಂಗ್‌ನಲ್ಲಿ ಅಬ್ಬರಿಸಿ 176 ರನ್ ಟಾರ್ಗೆಟ್ ನೀಡಿದ್ದ ಭಾರತ, ಬೌಲಿಂಗ್‌ನಲ್ಲೂ ಕರಾರುವಕ್ಕಾದ ದಾಳಿ ನಡೆಸಿತು. ಇದರ ಪರಿಣಾಮವಾಗಿ ದಕ್ಷಿಣ ಆಫ್ರಿಕಾ ಕೇವಲ 12.3 ಓವರ್‌ಗಳಲ್ಲಿ ಹೋರಾಟ ಮುಗಿಸಿತು.
ಖಾತೆ ತೆರೆಯುವ ಮುನ್ನವೇ ಆಘಾತ
176 ರನ್‌ಗಳ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭದಲ್ಲೇ ಅರ್ಶದೀಪ್ ಸಿಂಗ್ ಶಾಕ್ ನೀಡಿದರು. ತಂಡದ ಖಾತೆ ತೆರೆಯುವ ಮುನ್ನವೇ ಮತ್ತು ಕೇವಲ 2 ಎಸೆತಗಳನ್ನು ಎದುರಿಸಿದ್ದಾಗ ಸ್ಟಾರ್ ಆಟಗಾರ ಕ್ವಿಂಟನ್ ಡಿಕಾಕ್ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಈ ಆಘಾತದಿಂದ ಚೇತರಿಸಿಕೊಳ್ಳಲು ಸಫಾರಿ ಪಡೆಗೆ ಸಾಧ್ಯವಾಗಲೇ ಇಲ್ಲ.
ನಾಯಕ ಏಡನ್ ಮಾರ್ಕ್ರಮ್ ಮತ್ತು ಟ್ರಿಸ್ಟನ್ ಸ್ಟಬ್ಸ್ ತಲಾ 14 ರನ್ ಗಳಿಸಿ ಅಲ್ಪ ಮೊತ್ತಕ್ಕೆ ನಿರ್ಗಮಿಸಿದರು. ಒಂದು ಹಂತದಲ್ಲಿ ಯುವ ಆಟಗಾರ ಡೆವಾಲ್ಡ್ ಬ್ರೆವಿಸ್ 22 ರನ್ ಸಿಡಿಸಿ ಹೋರಾಟದ ಮುನ್ಸೂಚನೆ ನೀಡಿದರಾದರೂ, ಭಾರತದ ಸಂಘಟಿತ ದಾಳಿಯ ಮುಂದೆ ಅವರ ಆಟ ನಡೆಯಲಿಲ್ಲ. ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್ ಹಾಗೂ ಕೇಶವ್ ಮಹಾರಾಜ್ ಬಂದ ದಾರಿಯಲ್ಲೇ ಸುಲಭವಾಗಿ ವಿಕೆಟ್ ಒಪ್ಪಿಸಿದರು.
ಬೌಲರ್‌ಗಳ ಸಂಘಟಿತ ಪ್ರದರ್ಶನ
ಭಾರತದ ಪರ ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಹಾಗೂ ಅಕ್ಸರ್ ಪಟೇಲ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದರು. ಇನ್ನುಳಿದಂತೆ ಹಾರ್ದಿಕ್ ಪಾಂಡ್ಯ ಹಾಗೂ ಶಿವಂ ದುಬೆ ತಲಾ ಒಂದೊಂದು ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾವನ್ನು 100 ರನ್‌ಗಳ ಒಳಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.
ಭಾರತದ ವಿರುದ್ಧ 4ನೇ ಕನಿಷ್ಠ ಮೊತ್ತ
ಕಟಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ 74 ರನ್‌ಗೆ ಆಲೌಟ್ ಆಗುವ ಮೂಲಕ ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ತನ್ನ ಅತ್ಯಲ್ಪ ಮೊತ್ತಗಳಲ್ಲಿ ಒಂದನ್ನು ದಾಖಲಿಸಿತು. ಟೀಂ ಇಂಡಿಯಾ ವಿರುದ್ಧ ದಾಖಲಾದ ಕನಿಷ್ಠ ಮೊತ್ತಗಳ ಪಟ್ಟಿಯಲ್ಲಿ ಇದು 4ನೇ ಸ್ಥಾನ ಪಡೆದಿದೆ.
ಭಾರತ ವಿರುದ್ಧ ಅತ್ಯಲ್ಪ ಮೊತ್ತಕ್ಕೆ ಆಲೌಟ್ ಆದ ಪಂದ್ಯಗಳು (ಟಿ20):
ಯುಎಇ (2025) 57 ರನ್
ನ್ಯೂಜಿಲೆಂಡ್ (2023) 66 ರನ್
ಐರ್ಲೆಂಡ್ (2018) 70 ರನ್
ದಕ್ಷಿಣ ಆಫ್ರಿಕಾ (2025) 74 ರನ್
ಇಂಗ್ಲೆಂಡ್ (2012) 80 ರನ್








