ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದ ಬೆನ್ನಲ್ಲೇ, ಕರ್ನಾಟಕ ಕಾಂಗ್ರೆಸ್ ತೀವ್ರವಾಗಿ ಟಾಂಗ್ ನೀಡಿದೆ. ಸಾಮಾಜಿಕ ಮಾಧ್ಯಮ ವೇದಿಕೆಯಲ್ಲಿ ಕಾಂಗ್ರೆಸ್ ಹಂಚಿಕೊಂಡಿರುವ ಪೋಸ್ಟ್ಗಳು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿವೆ.
ಎಕ್ಸ್ (ಹಳೆಯ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್, ಈಗಾ ಸಂತೋಷವಾಯ್ತಾ? ಆ ಜೀ ಈ ಜೀ ಗಳ ಮಾತು ಕೇಳಿ ರಾಜಕೀಯ ಜೀವನ ಹಾಳು ಮಾಡಿಕೊಂಡ ಯತ್ನಾಳ್ ಎಂದು ವ್ಯಂಗ್ಯವಾಡಿದೆ. ಜೊತೆಗೆ, ಹಿಂದೂ ಹುಲಿ ಇಲಿಯಾದ ಕಥೆ, ಯತ್ನಾಳ್ಗೆ ಬಿಲ ತೋಡಿ ಮಣ್ಣು ಮುಚ್ಚಿದ ವಿಜಯೇಂದ್ರ ಎಂಬ ಲೇವಡಿ ಮಾಡುವ ಮಾತುಗಳನ್ನು ಬಳಸಿದೆ.
ಇದನ್ನು ಇನ್ನಷ್ಟು ಗಂಭೀರಗೊಳಿಸುವಂತೆ, “ಭ್ರಷ್ಟ ಅಪ್ಪ ಮಕ್ಕಳ ಸೂಟ್ಕೇಸ್ ರಾಜಕೀಯಕ್ಕೆ ಬಗ್ಗಿದ ಹೈಕಮಾಂಡ್ ಎಂಬ ಕಟುವಾದ ವಾಕ್ಯಗಳೊಂದಿಗೆ, ಯಡಿಯೂರಪ್ಪ, ವಿಜಯೇಂದ್ರ ಮತ್ತು ಯತ್ನಾಳ್ ಫೋಟೋಗಳಿರುವ ಪೋಸ್ಟರ್ ಕೂಡಾ ಹಂಚಿಕೊಂಡಿದೆ.
ಈ ಕಿಡಿ ಮಾತುಗಳ ನಡುವೆಯೂ, ಯತ್ನಾಳ್ ಈ ಕುರಿತು ಏನಾದರೂ ಪ್ರತಿಕ್ರಿಯಿಸುತ್ತಾರಾ? ಅವರು ಮುಂದಿನ ರಾಜಕೀಯ ಹೆಜ್ಜೆ ಏನು? ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮೂಡಿದೆ.