ಹಾಸನ – ಕೊಲೆ ಮಾಡಿ ಅತ್ಯಾಚಾರ ನಡೆಸಿ ರಾಕ್ಷಸ ಪ್ರವೃತ್ತಿ ಮೆರೆದ ನೀಚ – ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಹಾಸನ, ಅಗಸ್ಟ್26: ಹಾಸನದ ಬಿಎಮ್ ರಸ್ತೆಯ ಖಾಸಗಿ ಬ್ಯಾಂಕ್ ಒಂದರ ಮಳಿಗೆ ಮುಂಭಾಗ ಮಂಗಳವಾರ ಬೆಳಗ್ಗೆ ಅನಾಥ ಮಹಿಳೆಯ ಶವ ಪತ್ತೆಯಾಗಿದೆ. ಆಕೆಯನ್ನು ಭೀಕರವಾಗಿ ಕೊಲೆ ಮಾಡಲಾಗಿದ್ದು, ಕೊಲೆಯ ಭೀಕರತೆಯನ್ನು ಸಿಸಿಟಿವಿ ದೃಶ್ಯಾವಳಿಗಳು ತೆರೆದಿಟ್ಟಿವೆ.

ಹತ್ಯೆಗೀಡಾದ ಮಹಿಳೆಯ ವಯಸ್ಸು ಸುಮಾರು 35- -40 ವರ್ಷವಿರಬಹುದೆಂದು ಅಂದಾಜಿಸಲಾಗಿದ್ದು, ಮಹಿಳೆ ಯಾರು ಎಂಬುವುದು ಪತ್ತೆಯಾಗಿಲ್ಲ. ಹಾಸನ ನಗರ ಠಾಣೆ ಪೊಲೀಸ್ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಪ್ರಾರಂಭಿಸಿದ್ದಾರೆ.
ಕೊಲೆಯ ಭೀಕರತೆ ಸಮೀಪದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆ ಆಗಿದ್ದು, ದೃಶ್ಯಾವಳಿಗಳು ಎದೆ ನಡುಗಿಸುವಂತಿದೆ.
ಕಾಮುಕ ದುಷ್ಕಮಿಗೆ ಮಹಿಳೆ ಕೈ ಮುಗಿದರೂ ಆತ ಆಕೆಯನ್ನು ಎಳೆದಾಡಿ ಹಲ್ಲೆ ಮಾಡಿ ನಂತರ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಹಾಕಿ ಕೊಲೆ ಮಾಡಿದ್ದಾನೆ. ನಂತರ ಅತ್ಯಾಚಾರ ನಡೆಸಿ ರಾಕ್ಷಸ ಪ್ರವೃತ್ತಿ ಮೆರೆದಿದ್ದಾನೆ. ದುಷ್ಕರ್ಮಿಯ ಕೃತ್ಯ ಇಡೀ ಮಾನವ ಸಮಾಜವೇ ತಲೆ ತಗ್ಗಿಸುವಂತಿದೆ.
ಹಾಸನ ಡಿಸಿ ಆರ್ ಗಿರೀಶ್ ಪ್ರತಿಕ್ರಿಯೆ ನೀಡಿದ್ದು ಶೀಘ್ರದಲ್ಲೇ ಆರೋಪಿಯ ಪತ್ತೆ ಹಚ್ಚಲಾಗುವುದು ಎಂದು ಹೇಳಿದ್ದಾರೆ.
ಹಾಸನ ಎಸ್ಪಿ ಶ್ರೀನಿವಾಸ್ ಗೌಡ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ಆತ ಹಾಸನದವನೇ ಅಥವಾ ಹೊರ ಜಿಲ್ಲೆ ಅಥವಾ ರಾಜ್ಯದವನೇ ಎಂಬುವುದು ತನಿಖೆಯಲ್ಲಿ ಬಯಲಾಗಲಿದೆ. ಶೀಘ್ರದಲ್ಲೇ ದುಷ್ಕರ್ಮಿಯನ್ನು ಪತ್ತೆ ಹಚ್ಚಲಾಗುವುದು ಎಂದು ಭರವಸೆ ನೀಡಿದ್ದಾರೆ.

ಹಾಸನದ ಶಾಸಕ ಪ್ರೀತಮ್ ಗೌಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ನಿರ್ಗತಿಕ ಮಹಿಳೆಯೆಂದು ಯಾವುದೇ ಕಾರಣಕ್ಕೂ ಅಸಡ್ಡೆ ಮಾಡಲಾಗುವುದಿಲ್ಲ. ಪ್ರಕರಣದ ಆರೋಪಿಗೆ ಶಿಕ್ಷೆಯಾಗುವ ನಿಟ್ಟಿನಲ್ಲಿ ಶೀಘ್ರವೇ ಆತನ ಪತ್ತೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು. ಹಾಸನ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ಕೂಡ ಈ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿ ಪಡೆದಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಗೆ ಈ ಕೊಲೆ ಮಾಡಿರುವ ವ್ಯಕ್ತಿಯ ಗುರುತು ಸಿಕ್ಕಲ್ಲಿ ಹಾಸನ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿ ಬಂಧಿಸುವಲ್ಲಿ ಸಹಕರಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.








