ಉತ್ತರ ಪ್ರದೇಶ : ತೀವ್ರ ವಿರೋಧದ ನಡುವೆ ಹತ್ರಾಸ್ ನಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟ ಯುವತಿಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.
ಸಾಮೂಹಿಕ ಅತ್ಯಾಚಾರ ಮತ್ತು ಚಿತ್ರಹಿಂಸೆಗೊಳಗಾಗಿ ಮಂಗಳವಾರ ದೆಹಲಿಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ 20 ವರ್ಷದ ಯುವತಿಯ ಅಂತ್ಯಸಂಸ್ಕಾರವನ್ನು ಕಳೆದ ರಾತ್ರಿ ಪೊಲೀಸರೇ ನೆರವೇರಿಸಿದ್ದಾರೆ.
ಈ ವೇಳೆ ಮೃತ ಯುವತಿಯ ಕುಟುಂಬ ಮತ್ತು ಸಂಬಂಧಿಕರನ್ನು ಅವರ ಮನೆಯಲ್ಲೇ ಕೂಡಿಹಾಕಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಸಂತ್ರಸ್ತೆಯ ಅಂತ್ಯಸಂಸ್ಕಾರಕ್ಕೆ ಸ್ಥಳೀಯ ಜನರು ಮತ್ತು ಆಕೆಯ ಕುಟುಂಬಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಪೊಲೀಸರು ಯಾವುದಕ್ಕೂ ಕ್ಯಾರೆ ಎನ್ನಲದೇ ಸಂತ್ರಸ್ತೆಯ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಈ ಬಗ್ಗೆ ಹತ್ರಾಸ್ ಜಂಟಿ ಮ್ಯಾಜಿಸ್ಟ್ರೇಟ್ ಪ್ರೇಮ್ ಪ್ರಕಾಶ್ ಮೀನಾ ಪ್ರತಿಕ್ರಿಯಿಸಿದ್ದು, ನಾವು ಸಂತ್ರಸ್ತೆಯ ಕುಟುಂಬ ಸದಸ್ಯರೊಂದಿಗೆ ಮಾತನಾಡಿದ್ದೇವೆ.
ಇಲ್ಲಿ ಶಾಂತಿ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂತ್ರಸ್ತೆಯ ಅಂತಿಮ ವಿಧಿ-ವಿಧಾನಗಳನ್ನು ನಡೆಸಲಾಗಿದೆ.
ಈಗಾಗಲೇ ಪ್ರಕರಣದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ ಸಂತ್ರಸ್ತೆಯ ಕುಟುಂಬಕ್ಕೆ ಆರ್ಥಿಕ ನೆರವು ನೀಡಲಾಗಿದೆ ಎಂದು ಅವರು ತಿಳಿಸಿದರು.









