ವಿವಿಎಸ್ ಲಕ್ಷ್ಮಣ್. ಹೆಸರಿಗೆ ತಕ್ಕಂತೆ ವಿಶ್ವ ಕ್ರಿಕೆಟ್ನ ವೆರಿ ವೆರಿ ಸ್ಪೆಷಲ್ ಆಟಗಾರ. ಟೀಮ್ ಇಂಡಿಯಾದ ಪಾಲಿಗೆ ಎದುರಾಳಿ ಬೌಲರ್ಗಳಿಗೆ ಲಕ್ಷ್ಮಣ್ ಲಕ್ಷಣ ರೇಖೆ ಇದ್ದಂತೆ. ಟೀಮ್ ಇಂಡಿಯಾದ ಟೆಸ್ಟ್ ತಂಡದ ನಾಲ್ಕು ಬ್ಯಾಟಿಂಗ್ ಪಿಲ್ಲರ್ಗಳಲ್ಲಿ ಲಕ್ಷ್ಮಣ್ ಕೂಡ ಒಬ್ಬರು.
ಆದ್ರೆ ಸಚಿನ್, ದ್ರಾವಿಡ್, ಗಂಗೂಲಿಯ ಅಬ್ಬರದ ನಡುವೆ ಲಕ್ಷ್ಮಣ್ ಪ್ರಭಾವಳಿ ಸ್ವಲ್ಪ ಕಡಿಮೆಯಾಗಿರಬಹುದು. ಆದ್ರೂ ಲಕ್ಷ್ಮಣ್ ತನ್ನ ಮಣಿಕಟ್ಟಿನ ಬ್ಯಾಟಿಂಗ್ ಶೈಲಿಯಿಂದಲೇ ವಿಶ್ವ ಕ್ರಿಕೆಟ್ ನಲ್ಲಿ ತನ್ನದೇ ಆದ ಸ್ಥಾನಮಾನವನ್ನು ಪಡೆದುಕೊಂಡಿದ್ದಾರೆ.
ಇನ್ನು ಲಕ್ಷ್ಮಣ್ ಸ್ವಭಾವ ಕೂಡ ಅಷ್ಟೇ. ಮೃದು ವ್ಯಕ್ತಿತ್ವ. ಶಾಂತ ಸ್ವರೂಪಿ. ಸ್ಟೈಲೀಶ್ ಬ್ಯಾಟಿಂಗ್ ನಂತೆ ತನ್ನ ವ್ಯಕ್ತಿತ್ವವನ್ನು ಕೂಡ ರೂಪಿಸಿಕೊಂಡಿರುವ ಲಕ್ಷ್ಮಣ್ ಯಾವತ್ತೂ ಕೂಡ ಮೈದಾನದಲ್ಲಿ ಸಿಟ್ಟು ಮಾಡಿಕೊಂಡಿರಲಿಲ್ಲ.
ಆದ್ರೆ ಒಂದು ಪಂದ್ಯದಲ್ಲಿ ಲಕ್ಷ್ಮಣ್ ಯಾವ ರೀತಿ ಸಿಟ್ಟು ಮಾಡಿಕೊಂಡಿದ್ದರು ಎಂಬುದನ್ನು ಸುರೇಶ್ ರೈನಾ ಹೇಳಿಕೊಂಡಿದ್ದಾರೆ. ಬಹುಶಃ ಲಕ್ಷ್ಮಣ್ ಅವರು ಆ ರೀತಿ ಸಿಟ್ಟು ಮಾಡಿಕೊಂಡಿರುವುದನ್ನು ನಾನು ಯಾವತ್ತೂ ನೋಡಿಲ್ಲ ಎಂದು 2010ರ ಆಸ್ಟ್ರೇಲಿಯಾ ವಿರುದ್ಧ ಪಂದ್ಯದ ಘಟನೆಯನ್ನು ಸ್ಮರಿಸಿಕೊಂಡಿದ್ದಾರೆ.
ಅದು ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯ. ಗೆಲ್ಲಲು ಭಾರತಕ್ಕೆ 216 ರನ್ಗಳು ಬೇಕಿದ್ದವು. ಆಸೀಸ್ನ ಮಾರಕ ದಾಳಿಗೆ ತತ್ತರಿಸಿದ್ದ ಭಾರತ 124 ರನ್ ಗಳಿಸುವಷ್ಟರಲ್ಲಿ ಎಂಟು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಇನ್ನೇನೂ ಪಂದ್ಯದಲ್ಲಿ ಸೋಲು ಖಚಿತ ಅಂದುಕೊಂಡುವಷ್ಟರಲ್ಲಿ ಲಕ್ಷ್ಮಣ್ ಅದ್ಭುತವಾದ ಬ್ಯಾಟಿಂಗ್ ಮೂಲಕ ತಂಡಕ್ಕೆ ಗೆಲುವನ್ನು ಒದಗಿಸಿಕೊಟ್ಟಿದ್ದರು.
9ನೇ ವಿಕೆಟ್ಗೆ ಇಶಾಂತ್ ಶರ್ಮಾ ಜೊತೆ 81 ರನ್ಗಳ ಜೊತೆಯಾಟವನ್ನು ಆಡಿದ್ದರು. ಈ ಹಂತದಲ್ಲಿ 32 ರನ್ಗಳಿಸಿದ್ದ ಇಶಾಂತ್ ವಿಕೆಟ್ ಒಪ್ಪಿಸಿದ್ದರು. ಆಗ ಭಾರತಕ್ಕೆ ಗೆಲ್ಲಲು ಇನ್ನೂ 11 ರನ್ಗಳು ಬೇಕಿದ್ದವು. ಆ ಹಂತದಲ್ಲಿ ಪ್ರಗ್ಯಾನ್ ಓಜ್ಹಾ ಜೊತೆ ಸೇರಿಕೊಂಡು ಟೀಮ್ ಇಂಡಿಯಾವನ್ನು ಗೆಲುವಿನ ದಡ ಸೇರಿಸಿದ್ದರು. ಲಕ್ಷ್ಮಣ್ ಅಜೇಯ 73 ರನ್ ಹಾಗೂ ಓಜ್ಹಾ ಅಜೇಯ 5 ರನ್ ದಾಖಲಿಸಿದ್ದರು.
ಈ ಪಂದ್ಯದ ಕೊನೆಯ ಹಂತದಲ್ಲಿ ಲಕ್ಷ್ಮಣ್ ಸಂಪೂರ್ಣವಾಗಿ ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದರು. ಲಕ್ಷ್ಮಣ್ ಆ ರೀತಿ ಸಿಟ್ಟು ಮಾಡಿಕೊಂಡಿರುವುದನ್ನು ನಾನು ಯಾವತ್ತೂ ನೋಡಿಲ್ಲ. ಮತ್ತೊಂದೆಡೆ ಲಕ್ಷ್ಮಣ್ ಅವರು ಬೆನ್ನು ನೋವಿನಿಂದ ಬಳಲುತ್ತಿದ್ದರು. ಹೀಗಾಗಿ ಲಕ್ಷ್ಮಣ್ಗೆ ರನ್ನರ್ ಆಗಿ ನಾನು ಕ್ರೀಸ್ಗೆ ಹೋಗಿದ್ದೆ. ಮಿಚ್ಟೆಲ್ ಜಾನ್ಸನ್ ರಿವರ್ಸ್ ಸ್ವಿಂಗ್ ಮೂಲಕ ತಲೆನೋವಾಗಿ ಪರಿಣಮಿಸುತ್ತಿದ್ದರು.
ಈ ಹಂತದಲ್ಲಿ ಲಕ್ಷ್ಮಣ್ಗೆ ಸ್ಟ್ರೈಕ್ ಸಿಗುವಂತೆ ಮಾಡೋದು ನಮ್ಮ ಪ್ಲಾನ್ ಆಗಿತ್ತು. ಹಾಗಾಗಿ ಲಕ್ಷ್ಮಣ್ ರನ್ ಓಜ್ಹಾ ರನ್ ಅಂತ ಹೇಳುತ್ತಲೇ ಇದ್ರು ಎಂದು ಸುರೇಶ್ ರೈನಾ ನೆನಪಿಸಿಕೊಂಡಿದ್ದಾರೆ. ಸುರೇಶ್ ರೈನಾ ಒಂದು ವಾರದ ಹಿಂದೆಯಷ್ಟೇ ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ಅಲ್ಲದೆ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ 86 ರನ್ ದಾಖಲಿಸಿದ್ದರು.







