34ನೇ ವಸಂತಕ್ಕೆ ಕಾಲಿಟ್ಟ ಅನುಷ್ಕ ಶರ್ಮಾ, 14 ವರ್ಷಗಳ ವೃತ್ತಿಜೀವನದಲ್ಲಿ 22 ಚಿತ್ರಗಳಲ್ಲಿ ನಟನೆ
ಅನುಷ್ಕಾ ಶರ್ಮಾ ಇಂದು ತಮ್ಮ 34 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಟಿ ಮತ್ತು ನಿರ್ಮಾಪಕಿ ಅನುಷ್ಕ 2012 ರಲ್ಲೇ ಫೋರ್ಬ್ಸ್ ಇಂಡಿಯಾದ ಟಾಪ್ 100 ರಲ್ಲಿ ಸ್ಥಾನ ಪಡೆದು ಹೆಸರು ಮಾಡಿದ್ದರು. 2018 ರಲ್ಲಿ ಫೋರ್ಬ್ಸ್ ಏಷ್ಯಾದ ಟಾಪ್ 30 ರಲ್ಲಿ ಇವರೂ ಒಬ್ಬರಾಗಿದ್ದರು.
ಅನುಷ್ಕಾ ಶರ್ಮಾ ಹುಟ್ಟಿದ್ದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ, ಆದರೆ ಬೆಳೆದಿದ್ದು ಬೆಂಗಳೂರಿನಲ್ಲಿ. ಅವರ ತಂದೆ ಕರ್ನಲ್ ಅಜಯ್ ಕುಮಾರ್ ಶರ್ಮಾ ಸೇನೆಯಲ್ಲಿ ಅಧಿಕಾರಿಯಾಗಿದ್ದರು. ಅನುಷ್ಕಾ ಸಹೋದರ ಕರ್ಣೇಶ್ ಶರ್ಮಾ ಕೂಡ ಸಿನಿಮಾ ನಿರ್ಮಾಪಕ. ಅನುಷ್ಕಾ ತಮ್ಮ ಚಿತ್ರರಂಗದ ವೃತ್ತಿ ಜೀವನದಲ್ಲಿ ಇದುವರೆಗೆ 22 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.
ಅನುಷ್ಕ ಮೊದಲಿನಿಂದಲೂ ಮಾಡೆಲ್ ಆಗಬೇಕೆಂದು ಬಯಸಿದ್ದರು. ಪದವಿ ಮುಗಿದ ನಂತರ ಮಾಡೆಲಿಂಗ್ ಗಾಗಿ ಮುಂಬೈಗೆ ಕಾಲಿಟ್ಟರು. 2007 ರಲ್ಲಿ ಫ್ಯಾಶನ್ ಡಿಸೈನರ್ ವೆಂಡೆಲ್ ರಾಡ್ರಿಕ್ಸ್ ಅವರ ಮೊದಲ ಮಾಡೆಲಿಂಗ್ ನಲ್ಲಿ ಪಾಲ್ಗೊಂಡರು. ಇದಾದ ನಂತರ ಒಂದರ ಹಿಂದೆ ಒಂದರಂತೆ ಹಲವು ಬ್ರಾಂಡ್‌ಗಳ ಜಾಹೀರಾತುಗಳಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಅವರು ಸಿಲ್ಕ್ & ಶೈನ್, ವಿಸ್ಪರ್, ನಥಾಲಾ ಭೂಷಣ್ ಮತ್ತು ಫಿಯೆಟ್ ಪಾಲಿಯೊದಂತಹ ಬ್ರ್ಯಾಂಡ್‌ಗಳಿಗಾಗಿ ಕೆಲಸ ಮಾಡಿದ್ದಾರೆ.
ಮಾಡೆಲಿಂಗ್ ಮಾಡುವಾಗಲೇ ಅನುಷ್ಕಾ ಆಕ್ಟಿಂಗ್ ಸ್ಕೂಲ್ ಗೆ ಸೇರಿಕೊಂಡು, ಸಿನಿಮಾಗೆ ಆಡಿಷನ್ ಕೊಡಲು ಪ್ರಾರಂಭಿಸಿದರು. ಯಶ್ ರಾಜ್ ಫಿಲ್ಮ್ಸ್ ಸ್ಟುಡಿಯೋದಲ್ಲಿ ತಮ್ಮ ಸ್ಕ್ರೀನ್ ಟೆಸ್ಟ್ ನೀಡಿದರು. ಆಡಿಷನ್ ನಂತರ, ‘ರಬ್ ನೆ ಬನಾ ದಿ ಜೋಡಿ’, ‘ಬದ್ಮಾಶ್ ಕಂಪನಿ ಮತ್ತು ‘ಬ್ಯಾಂಡ್ ಬಾಜಾ ಬಾರಾತ್’ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡರು.
ಅನುಷ್ಕಾ 2008 ರಲ್ಲಿ ಆದಿತ್ಯ ಚೋಪ್ರಾ ಅವರ ರೊಮ್ಯಾಂಟಿಕ್ ಚಿತ್ರ ‘ರಬ್ ನೆ ಬನಾ ದಿ ಜೋಡಿ’ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಶಾರುಖ್ ಖಾನ್ ಮುಖ್ಯ ಪಾತ್ರದಲ್ಲಿದ್ದರು. ಈ ಚಿತ್ರದಲ್ಲಿ ಅನುಷ್ಕಾ ತಾನಿ ಸಾಹ್ನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕಾಗಿ, ಅವರು ಅತ್ಯುತ್ತಮ ಮಹಿಳಾ ನಟಿ ಮತ್ತು ಅತ್ಯುತ್ತಮ ಮಹಿಳಾ ಚೊಚ್ಚಲ ಪ್ರಶಸ್ತಿಗಳಂತಹ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡರು.
ಅವರ ಚಲನಚಿತ್ರ ವೃತ್ತಿಜೀವನದಲ್ಲಿ ‘ಜಬ್ ತಕ್ ಹೈ ಜಾನ್’, ‘ಪಿಕೆ’, ‘ಸುಲ್ತಾನ್’, ‘ಏ ದಿಲ್ ಹೈ ಮುಷ್ಕಿಲ್’ ಮುಂತಾದ ಹಿಟ್‌ಗಳು ಸೇರಿವೆ, ಆದರೆ ‘ಮಾತೃ ಕಿ ಬಿಜ್ಲಿ ಕಾ ಮನ್ ಡೋಲಾ’, ‘ಬಾಂಬೆ ವೆಲ್ವೆಟ್’, ‘ಫಿಲೌರಿ’ ಚಿತ್ರಗಳು ವಿಫಲವಾಗಿವೆ. ಜಬ್ ತಕ್ ಹೈ ಜಾನ್ ಚಿತ್ರವು 2012 ರ ಬಾಲಿವುಡ್ ಚಲನಚಿತ್ರಗಳಲ್ಲಿ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಚಲನಚಿತ್ರವಾಗಿದೆ.
ಅನುಷ್ಕ 2013 ರಲ್ಲಿ ಮೊದಲ ಬಾರಿಗೆ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ಭೇಟಿಯಾದರು. ಶಾಂಪೂ ಜಾಹೀರಾತಿನಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಪರಿಚಯವಾಗಿದ್ದರು. ನಂತರ ಕೆಲವು ವರ್ಷಗಳ ಕಾಲ ಡೇಟಿಂಗ್ ನಡೆಸಿ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇಬ್ಬರಿಗೂ ವಾಮಿಕಾ ಎಂಬ ಮಗಳಿದ್ದಾಳೆ.








