ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಜೆ.ಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕಣಕ್ಕಿಳಿಯಲಿದ್ದಾರೆ. ಕಳೆದ ಒಂದು ವಾರದಿಂದ ಹೆಚ್.ಡಿ ದೇವೇಗೌಡರು ಕಣಕ್ಕಿಳಿಯುತ್ತಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ದೇವೇಗೌಡರು ಮೌನ ತಾಳಿದ್ದರು. ಇದೀಗ ಅವರೇ ಜೆಡಿಎಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾಗಿದೆ.
ಜೆಡಿಎಸ್ ಗೆ 34 ಶಾಸಕರ ಬೆಂಬಲವಿದೆ. ಹಾಗಾಗಿ ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆ ಚುನಾವಣೆಗೆ ದೇವೇಗೌಡರು ಕಣಕ್ಕಿಳಿಯುತ್ತಿದ್ದಾರೆ. ನಿನ್ನೆಯಷ್ಟೇ ನಾವು ಬಿಜೆಪಿಗೆ ಬೆಂಬಲ ನೀಡುವುದಿಲ್ಲ. ನಮ್ಮ ಉಳಿತ ಮತಗಳನ್ನು ಯಾರಿಗೆ ಹಾಕಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರು.
ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಿಂದಾಗಿ ಹೆಚ್.ಡಿ.ದೇವೇಗೌಡರು ಸುಲಭವಾಗಿ ರಾಜ್ಯಸಭೆ ಪ್ರವೇಶ ಮಾಡಬಹುದು. ಜೊತೆಗೆ ಹೆಚ್.ಡಿ. ದೇವೇಗೌಡರು ಕಣಕ್ಕಿಳಿದರೇ ಬಿಜೆಪಿ ಸಹ ಮೂರನೇ ಅಭ್ಯರ್ಥಿಯನ್ನ ಕಣಕ್ಕಿಳಿಸುವುದಿಲ್ಲ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬಂದಿದ್ದವು.
ಈ ವಿಚಾರವಾಗಿ ಟ್ವೀಟ್ ಮಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನಮ್ಮ ಪಕ್ಷದ ಶಾಸಕರು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಷ್ಟ್ರದ ಹಲವು ನಾಯಕರ ಮನವಿಯ ಮೇರೆಗೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ. ನಾಳೆ ಅವರು ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡುವರು. ಎಲ್ಲರ ಒಮ್ಮತದ ಅಭಿಪ್ರಾಯಕ್ಕೆ ಸಮ್ಮತಿಸಿದ ದೇವೇಗೌಡರಿಗೆ ಧನ್ಯವಾದಗಳು. ರಾಜಕೀಯದಲ್ಲಿ ಜನರಿಂದಲೇ ಗೆಲುವು ಸೋಲುಗಳನ್ನು ಕಂಡಿರುವ, ಜನರಿಂದಲೇ ದೇಶದ ಅತ್ಯುನ್ನತ ಸ್ಥಾನಕ್ಕೇರಿದ್ದ ಜನನಾಯಕ ದೇವೇಗೌಡರನ್ನು ರಾಜ್ಯಸಭೆ ಪ್ರವೇಶಿಸುವಂತೆ ಮನವೊಲಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಎಲ್ಲರ ಆಶೋತ್ತರಗಳಿಗೆ ಪ್ರೀತಿಪೂರ್ವಕವಾಗಿ ಮಣಿದಿದ್ದಾರೆ. ರಾಜ್ಯಸಭೆಯಲ್ಲಿ ದೇವೇಗೌಡರು ರಾಜ್ಯದ ಅಗ್ರ ಪ್ರತಿನಿಧಿಯಾಗಲಿದ್ದಾರೆ ಎಂದು ಹೇಳಿದ್ದಾರೆ.