ನವದೆಹಲಿ : ಕೊರೊನಾ ಪರಿಸ್ಥಿತಿ ನಿರ್ವಹಣೆ ಹಾಗೂ ಕೇಂದ್ರದ ಕ್ರಮಗಳ ಕುರಿತಂತೆ ಇಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರತಿಪಕ್ಷಗಳ ನಾಯಕರೊಂದಿಗೆ ವಿಡಿಯೋ ಸಂವಾದ ನಡೆಸಿದರು. ಇದರಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಅವರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗಿತ್ತು. ವಿಡಿಯೋ ಸಂವಾದದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು, ಕೊರೊನಾ ವಿಚಾರವಾಗಿ ಕರ್ನಾಟಕದ ಮಾಹಿತಿ ನೀಡಿದರು. ಈ ವೇಳೆ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ ಜೊತೆಗಿದ್ದರು.
ವಿಡಿಯೋ ಸಂವಾದ ಆರಂಭವಾಗುತ್ತಿದ್ದಂತೆ ದೇವೇಗೌಡರು ಸೋನಿಯಾ ಗಾಂಧಿ ಅವರಿಗೆ ಕೈ ಮುಗಿದರು. ಇದಕ್ಕೆ ಪ್ರತಿಯಾಗಿ ಸೋನಿಯಾ ಗಾಂಧಿ ಅವರು ಕೈ ಮುಗಿದು, ಗೌಡರ ಆರೋಗ್ಯ ವಿಚಾರಿಸಿದರು. ಬಳಿಕ ಕೇಂದ್ರ ಸರ್ಕಾರದ 20 ಲಕ್ಷ ಕೋಟಿ ರೂ.ಗಳ ಪ್ಯಾಕೇಜ್, ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ಸೋಂಕು, ವಲಸೆ ಕಾರ್ಮಿಕರ ವಿಷಯದಲ್ಲಿ ಎಸಗಿರುವ ತಪ್ಪುಗಳು, ರಾಜ್ಯಗಳಿಗೆ ಹಣ ಬಿಡದ ಕೇಂದ್ರ ಸರ್ಕಾರದ ಕ್ರಮ, ಪ್ರಧಾನ ಮಂತ್ರಿ ಮೋದಿ ಸರ್ಕಾರದ ನಿರ್ಧಾರಗಳ ಬಗ್ಗೆ ಸೋನಿಯಾ ಗಾಂಧಿ ಅವರು ಎಲ್ಲಾ ವಿರೋಧ ಪಕ್ಷಗಳ ಮುಖಂಡರೊಂದಿಗೆ ಚರ್ಚೆ ನಡೆಸಿದರು.
ಇನ್ನು ಈ ವಿಡಿಯೋ ಸಂವಾದದಲ್ಲಿ ಹೆಚ್.ಡಿ. ದೇವೇಗೌಡ, ಮಮತಾ ಬ್ಯಾನರ್ಜಿ, ಸಂಜಯ್ ರಾವತ್, ಹೇಮಂತ್ ಸೂರೇನ್, ಎಂ.ಕೆ. ಸ್ಟಾಲಿನ್, ಶರದ್ ಪವಾರ್, ಸೀತಾರಾಮ್ ಯೆಚೂರಿ ಸೇರಿ 18 ಪಕ್ಷಗಳ ನಾಯಕರು ಭಾಗಿಯಾಗಿದ್ದರು.








