ಬೆಂಗಳೂರು : ಇದೇ ತಿಂಗಳ 18ರಂದು ಮಾಜಿ ಪ್ರಧಾನಿ, ಹೆಚ್.ಡಿ.ದೇವೇಗೌಡ ಅವರ ಜನ್ಮ ದಿನ. 87 ನೇ ವಯಸ್ಸಿಗೆ ಕಾಲಿಡುತ್ತಿರುವ ದೇವೇಗೌಡರು, ಕೊರೊನಾದಿಂದಾಗಿ ಈ ಬಾರಿ ಹುಟ್ಟುಹಬ್ಬ ಆಚರಿಸದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಮನೆಯ ಬಳಿ ಬಾರದಂತೆ ಅಭಿಮಾನಿಗಳು, ನಾಯಕರು, ಕಾರ್ಯಕರ್ತರಿಗೆ ಸಂದೇಶ ರವಾನೆ ಮಾಡಿದ್ದಾರೆ.
ದೇಶದಲ್ಲಿ ಲಾಕ್ ಡೌನ್ ನಿಯಮಗಳು ನಡೆಯುತ್ತಿವೆ. ನಿಯಮಗಳನ್ನು ಮೀರುವುದನ್ನ ನಾನು ಒಪ್ಪುವುದಿಲ್ಲ. ಒಂದು ವಾರದಿಂದ ಕೊರೊನಾ ಸೋಂಕು ಹೆಚ್ಚಾಗಿರುವುದು ನನ್ನನ್ನು ಮತ್ತಷ್ಟು ಚಿಂತೆಗೀಡು ಮಾಡಿದೆ. ಹೀಗಾಗಿ ನೀವು ಇದ್ದ ಕಡೆಯಿಂದಲೇ ನನಗೆ ಶುಭಾಶಯ ತಿಳಿಸಿ. ಯಾರು ಮನೆಯ ಬಳಿ ಬರಬೇಡಿ ಎಂದು ದೇವೇಗೌಡ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಮಹಾಮಾರಿ ಕೊರೊನಾದಿಂದ ರಾಜ್ಯ ತತ್ತರಿಸಿದೆ. ಬಡವರು, ಕಾರ್ಮಿಕರು ತುತ್ತು ಅನ್ನಕ್ಕೂ ಪರಿತಪಿಸುವ ಸ್ಥಿತಿ ಬಂದೊದಗಿದೆ. ಇಂತಹ ವಿಷಮ ಸಂದರ್ಭದಲ್ಲಿ ನನ್ನ ಹುಟ್ಟುಹಬ್ಬವನ್ನು ಆಚರಿಸೋದು ಸೂಕ್ತವಲ್ಲ.
ಮೇ 18ರಂದು ಹೂಗುಚ್ಚಗಳೊಂದಿಗೆ ಬಂದು ಶುಭ ಹಾರೈಸುವ ಬದಲು ಕೊರೊನಾ ಸಂಕಷ್ಟ ಪೀಡಿತರಿಗೆ ತಮ್ಮ ಕೈಲಾದ ಸಹಾಯ ಮಾಡಬೇಕೆಂದು ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ. ಎಲ್ಲರೂ ಸರ್ಕಾರದ ನಿರ್ದೇಶನದಂತೆ ಸಾಮಾಜಿಕ ಅಂತರ ಕಾಯ್ದುಕೊಂಡು ಸುರಕ್ಷಿತರಾಗಿರೋಣ ಎಂದು ಅಭಿಮಾನಿಗಳಿಗೆ, ಕಾರ್ಯಕರ್ತರಿಗೆ, ಪಕ್ಷದ ನಾಯಕರಿಗೆ ಹೆಚ್ ಡಿಡಿ ಕರೆ ನೀಡಿದ್ದಾರೆ.