ಬೆಂಗಳೂರು : ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಸ್ಪರ್ಧೆ ಮಾಡಬೇಕು ಎಂದು ಜೆಡಿಎಸ್ ಶಾಸಕರು ಒತ್ತಡ ಹಾಕುತ್ತಿದ್ದಾರೆ. ಆದರೆ ಇಂದು ನಡೆದ ಸಭೆಯಲ್ಲಿ ಟಿಕೆಟ್ ಯಾರಿಗೆ ಅಂತ ಪೈನಲ್ ಆಗಿಲ್ಲ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಬೆಂಗಳೂರಿನ ಜೆಪಿ ಭವನದಲ್ಲಿ ಜೆಡಿಎಸ್ ಶಾಸಕಾಂಗ ಸಭೆ ನಡೆದಿದೆ. ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹೆಚ್.ಡಿ.ರೇವಣ್ಣ, ಜೆಡಿಎಸ್ ಹಿರಿಯ ನಾಯಕ ಬಸವರಾಜ ಹೊರಟ್ಟಿ, ಮಾಜಿ ಸಚಿವ ಬಂಡೆಪ್ಪ ಕಾಶೆಂಪುರ್, ಶಾಸಕ ಶಿವಲಿಂಗೇಗೌಡ, ಸಂಸದ ಪ್ರಜ್ವಲ್ ರೇವಣ್ಣ ಸೇರಿದಂತೆ ಜೆಡಿಎಸ್ ಶಾಸಕರು ಭಾಗಿಯಾಗಿದ್ದಾರೆ.
ಸಭೆ ಬಳಿಕ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಇವತ್ತಿನ ರಾಜಕೀಯ ಸಂದರ್ಭದಲ್ಲಿ ದೇವೇಗೌಡರು ರಾಜ್ಯಸಭೆ ಚುನಾವಣೆಗೆ ನಿಲ್ಲಬೇಕು ಎಂದು ಜೆಡಿಎಸ್ ಶಾಸಕರು ಒತ್ತಾಯ ಮಾಡಿದ್ದಾರೆ. ಆದರೆ ಇಲ್ಲಿಯವರೆಗೂ ದೇವೇಗೌಡರು ಚುನಾವಣೆಗೆ ನಿಲ್ಲುವ ಆಸಕ್ತಿ ವ್ಯಕ್ತಪಡಿಸಿಲ್ಲ. ಆದ್ದರಿಂದಲೇ ಈ ವಿಚಾರವಾಗಿ ಅವರ ಅಭಿಪ್ರಾಯ ನೀಡಿಲ್ಲ. ಆದರೆ ನಮ್ಮ ಶಾಸಕರು ಒಬ್ಬ ಅನುಭವಿ ರಾಜಕಾರಣಿ ದೆಹಲಿಯ ರಾಜ್ಯಸಭೆ ಹೋಗುವುದು ಅನಿವಾರ್ಯವಾಗಿದೆ ಎಂದು ಒತ್ತಡ ಹಾಕುತ್ತಿದ್ದಾರೆ.
ಇದೇ ವೇಳೆ ಅವರು, ಕಾಂಗ್ರೆಸ್ ಪಕ್ಷಕ್ಕೆ ಒಂದು ಸ್ಥಾನ ಗೆಲ್ಲುವ ನಂಬರ್ ಹೊಂದಿದೆ. ಅದರ ಜೊತೆಗೆ 22 ಶಾಸಕರ ಸಂಖ್ಯೆ ಹೆಚ್ಚುವರಿಯಾಗಿ ಹೊಂದಿದೆ. ಅದೆ ರೀತಿ ಬಿಜೆಪಿಯಲ್ಲೂ ಸಹ ಎರಡು ಸ್ಥಾನ ಗೆಲ್ಲಿಸಿಕೊಂಡು ಬಂದರೂ ಕೂಡ ಹೆಚ್ಚುವರಿಯಾಗಿ 22 ಮತಗಳಿವೆ. ಮೂರನೇ ಅಭ್ಯರ್ಥಿಯನ್ನು ನಿಲ್ಲಿಸಲು ಬಿಜೆಪಿಗೆ ಆಗುವುದಿಲ್ಲ. ಅದೆ ರೀತಿಯಾಗಿ ಎರಡನೇ ಅಭ್ಯರ್ಥಿಯನ್ನು ಹಾಕಲು ಕಾಂಗ್ರೆಸ್ ಪಕ್ಷಕ್ಕೂ ಆಗುವುದಿಲ್ಲ.
ಆ ಎರಡು ಪಕ್ಷಗಳ ಸಂಖ್ಯಾಬಲ ಗಮನಿಸಿದರೇ ನಮ್ಮ ಪಕ್ಷದ ಸಂಖ್ಯಾಬಲ ಸ್ವಲ ಹೆಚ್ಚಾಗಿದೆ. ಆದ್ದರಿಂದ ದೇವೇಗೌಡರು ಸ್ಪರ್ಧೆ ಮಾಡಿದರೇ ಯಾರು ಕೂಡ ಅಡ್ಡಿಪಡಿಸುವುದಿಲ್ಲ ಎಂಬ ಅಭಿಪ್ರಾಯ ನಮ್ಮ ಶಾಸಕರಲ್ಲಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.