ಬಳ್ಳಾರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಪ್ರಕರಣದ ತನಿಖೆಯಲ್ಲಿ ಹಲವು ಅನುಮಾನಗಳು ಮತ್ತು ಗಂಭೀರ ಲೋಪಗಳು ಕಂಡುಬರುತ್ತಿವೆ ಎಂದು ಅವರು ಹೇಳಿದ್ದಾರೆ.
ಗಲಭೆಯ ವೇಳೆ ಹತ್ಯೆಗೀಡಾದ ಕಾಂಗ್ರೆಸ್ ಕಾರ್ಯಕರ್ತನ ಮೃತದೇಹಕ್ಕೆ ಎರಡು ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ ಎಂಬ ಅಂಶವನ್ನು ಮುಂದಿಟ್ಟು, ತನಿಖೆಯ ಮೇಲೆಯೇ ಸಂಶಯ ವ್ಯಕ್ತಪಡಿಸಿದ್ದಾರೆ.
ಮೊದಲ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಏನು ಹೇಳಲಾಗಿತ್ತು? ಮತ್ತೆ ಎರಡನೇ ಬಾರಿ ಶವಪರೀಕ್ಷೆ ನಡೆಸುವಂತೆ ಯಾರು ಒತ್ತಾಯ ಮಾಡಿದರು? ಯಾರ ಅನುಮತಿಯೊಂದಿಗೆ ಮತ್ತೊಮ್ಮೆ ಮರಣೋತ್ತರ ಪರೀಕ್ಷೆ ನಡೆಸಲಾಯಿತು? ಎಂದು ಸರಣಿ ಪ್ರಶ್ನೆಗಳನ್ನು ಎಸೆದಿದ್ದಾರೆ.
ಈ ಪ್ರಕರಣದಲ್ಲಿ ಸತ್ಯಾಂಶಗಳನ್ನು ಮುಚ್ಚಿಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಅನುಮಾನಗಳು ಉದ್ಭವಿಸುತ್ತಿವೆ ಎಂದು ಹೇಳಿದ ಕುಮಾರಸ್ವಾಮಿ, ಪಾರದರ್ಶಕ ತನಿಖೆ ನಡೆಯಬೇಕೆಂಬುದು ಅತ್ಯಂತ ಅಗತ್ಯ ಎಂದು ಒತ್ತಾಯಿಸಿದರು. ಯಾವುದೇ ಪಕ್ಷಪಾತವಿಲ್ಲದೆ, ತಪ್ಪಿತಸ್ಥರನ್ನು ರಕ್ಷಿಸುವ ಬದಲು ನಿಜವಾದ ಆರೋಪಿಗಳನ್ನು ಪತ್ತೆಹಚ್ಚಬೇಕು ಎಂದು ಸರ್ಕಾರದ ಮೇಲೆ ಕಟು ಟೀಕೆ ಮಾಡಿದರು.
ಬಳ್ಳಾರಿ ಗಲಭೆ ಪ್ರಕರಣ ಈಗಾಗಲೇ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, HD ಕುಮಾರಸ್ವಾಮಿಯ ಈ ಹೇಳಿಕೆ ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.








