ಬೆಂಗಳೂರು: ಲೈಂಗಿಕ ದೌರ್ಜನ್ಯ ಹಾಗೂ ಮಹಿಳೆಯ ಕಿಡ್ನಾಪ್ ಕೇಸ್ ನಲ್ಲಿ ಸಿಲುಕಿರುವ ಎಚ್.ಡಿ. ರೇವಣ್ಣ ಅವರನ್ನು 4 ದಿನ ಎಸ್‌ಐಟಿ (SIT) ವಶಕ್ಕೆ ನೀಡಿ 17ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.
ನೋಟಿಸ್ ನೀಡಿದರೂ ವಿಚಾರಣೆಗೆ ಗೈರಾಗಿದ್ದ ರೇವಣ್ಣ ಅವರನ್ನು ಎಸ್‌ಐಟಿ ತಂಡ ಶನಿವಾರ ರಾತ್ರಿ ವಶಕ್ಕೆ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಇಂದು ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ನ್ಯಾಯಾಧೀಶರ ಮುಂದೆ ಹಾಜರುಪಡಿಸಿತ್ತು. ಪ್ರಕರಣದ ವಾದ-ಪ್ರತಿವಾದ ಆಲಿಸಿದ ಕೋರ್ಟ್, ಎಸ್ ಐಟಿ ವಶಕ್ಕೆ ನೀಡಿದೆ.
ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಎಸ್‌ಐಟಿ ತಂಡ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿತು. ಇದಕ್ಕೆ ರೇವಣ್ಣ ಅವರ ಪದ ವಕೀಲರು ಆಕ್ಷೇಪ ವ್ಯಕ್ತಪಡಿಸಿದರು. ಅಲ್ಲದೇ, ಜಾಮೀನು ನೀಡುವಂತೆ ಮನವಿ ಮಾಡಿದರು. ಸಂತ್ರಸ್ತೆ ಸಿಕ್ಕಿದ್ದಾರೆ. ರೇವಣ್ಣಗೂ ಅಪಹರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವಕೀಲರು ವಾದ ಮಂಡಿಸಿದರು.
ಆದರೆ, ಮಾಜಿ ಸಚಿವ ರೇವಣ್ಣ ವಿರುದ್ಧ 15ಕ್ಕೂ ಅಧಿಕ ಅಂಶಗಳಿರುವುದನ್ನು ಉಲ್ಲೇಖಿಸಿ ಎಸ್‌ಐಟಿ 5 ದಿನ ಕಸ್ಟಡಿಗೆ ಕೇಳಿತು. ಈ ವೇಳೆ ಹೆಚ್.ಡಿ.ರೇವಣ್ಣ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನನ್ನು ರಾಜಕೀಯವಾಗಿ ಮುಗಿಸುವ ಯತ್ನ ಇದಾಗಿದೆ. ಇದು ರಾಜಕೀಯ ಷಡ್ಯಂತ್ರ ಎಂದು ನ್ಯಾಯಾಧೀಶರ ಮುಂದೆ ಹೇಳಿದ್ದಾರೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ರವೀಂದ್ರಕುಮಾರ್ ಕಟ್ಟೀಮನಿ, ರೇವಣ್ಣರನ್ನು 4 ದಿನ ಎಸ್‌ಐಟಿ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದರು.