ಬೆಂಗಳೂರು: ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಅವರು ಜೆಡಿಎಸ್ ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ನಾಳೆ (ಸೋಮವಾರ) ನಡೆಸಲು ಉದ್ದೇಶಿಸಿದ್ದ ಧರಣಿಯನ್ನು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ವಾಪಸ್ ಪಡೆದಿದ್ದಾರೆ.
ಮಂಡ್ಯ ರಾಜಕಾರಣ ಕುರಿತು ದೇವೇಗೌಡರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದರು. ಮುಖ್ಯಮಂತ್ರಿಗಳು ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರು , ಮಂಡ್ಯ ರಾಜಕೀಯ ವಿದ್ಯಮಾನಗಳ ಕುರಿತು ನಮ್ಮ ಬೇಡಿಕೆಗಳನ್ನು ಈಡೇರಿಸಲು ಭಾಗಶಃ ಒಪ್ಪಿದ್ದಾರೆ. ಆದ್ದರಿಂದ ನಾಳೆ ನಡೆಸಬೇಕಿದ್ದ ಧರಣಿಯನ್ನು ವಾಪಾಸ್ ಪಡೆದಿರುವುದಾಗಿ ದೇವೇಗೌಡರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಕೆ.ಆರ್.ಪೇಟೆ ಕ್ಷೇತ್ರದ ಕ್ರಷರ್ ಮಾಲೀಕ ಎಚ್.ಟಿ. ಮಂಜುಗೆ ಕ್ರಷರ್ ನಿಲ್ಲಿಸುವಂತೆ ಕಿರುಕುಳ ನೀಡುವ ಮೂಲಕ ಸಚಿವ ನಾರಾಯಣಗೌಡ ರಾಜಕೀಯ ದ್ವೇಷ ಸಾಧಿಸುತ್ತಿದ್ದಾರೆ. ಮಂಜು ಅವರು ಕ್ರಷರ್ ನಿಲ್ಲಿಸಿದ್ದಾರೆ. ಸಕ್ರಮವಾಗಿರುವ ಅವರ ಕ್ರಷರ್‌ಗೆ ಅನುಮತಿ ಕೊಡಿಸಿ, ರಾಜಕೀಯ ದ್ವೇಷ ಸಾಧಿಸುತ್ತಿರುವ ನಾರಾಯಣಗೌಡ ಅವರಿಗೆ ತಿಳಿ ಹೇಳುವಂತೆ ಸಿಎಂಗೆ ಬರೆದ ಪತ್ರದಲ್ಲಿ ದೇವೇಗೌಡರು ಆಗ್ರಹಿಸಿದ್ದರು.
ಗೌಡರ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ದೇವೇಗೌಡರು ನನಗೆ ತಂದೆಯ ಸಮಾನ. ನಾನು ಅವರಿಂದಲೇ ರಾಜಕೀಯಕ್ಕೆ ಬಂದವನು. ಕಲ್ಲು ಗಣಿಗಾರಿಕೆ ವಿಚಾರದಲ್ಲಿ ಅವರು ನನ್ನ ಮೇಲೆ ಮಾಡಿರುವ ಆರೋಪ ಸತ್ಯವಲ್ಲ. ಯಾರೋ ಅವರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡುತ್ತೇನೆ. ಕ್ರಷರ್ ಮಾಲೀಕ ಮಂಜು ಅಕ್ರಮವಾಗಿ ಕಲ್ಲು ಕ್ವಾರೆ ನಡೆಸಿದ್ದಾರೆ. ರಾಯಲ್ಟಿ ಕಟ್ಟಲ್ಲ, ಮೈಸೂರಿನಲ್ಲಿ ಅಕ್ರಮ ಹಣದಲ್ಲಿ ಮನೆ ಕಟ್ಟಿದ್ದಾರೆ. ಇವರ ಕ್ವಾರೆಯಿಂದ ಸಾಹುಕಾರ್ ಚೆನ್ನಯ್ಯ ನಾಲೆ ಹಾಳಾಗಿದೆ. ಇದಕ್ಕೆ ದಾಖಲೆಗಳಿವೆ ಎಂದು ಹೇಳಿದ್ದರು.








