ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಬಿ’ ಖಾತಾದಿಂದ ‘ಎ’ ಖಾತಾ ಪರಿವರ್ತನೆ ಯೋಜನೆಯನ್ನು ‘ಸರ್ಕಾರದ ಬಹುದೊಡ್ಡ ಲೂಟಿ’ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಯಾರೊಬ್ಬರೂ ಈ ಯೋಜನೆಗೆ ಹಣ ಪಾವತಿಸಬಾರದು ಎಂದು ಬಹಿರಂಗವಾಗಿ ಕರೆ ನೀಡಿದ ಅವರು, ಮುಂದಿನ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಉಚಿತವಾಗಿ ಖಾತೆ ಮಾಡಿಕೊಡುವುದಾಗಿ ದೊಡ್ಡ ಭರವಸೆ ನೀಡಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ವಿರುದ್ಧ ತೀಕ್ಷ್ಣ ಆರೋಪಗಳ ಸುರಿಮಳೆಗೈದರು.
ಇದು ಸರ್ಕಾರದ 6ನೇ ಗ್ಯಾರಂಟಿ, ಜನರ ಲೂಟಿ
ಕಾಂಗ್ರೆಸ್ ಸರ್ಕಾರದ ಈ ಯೋಜನೆಯನ್ನು ‘ಆರನೇ ಗ್ಯಾರಂಟಿ’ ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, “ಇದು ಜನರ ಅನುಕೂಲಕ್ಕಾಗಿ ತಂದಿರುವ ಯೋಜನೆಯಲ್ಲ, ಬದಲಾಗಿ ಜನರ ತಲೆಗೆ ಟೋಪಿ ಹಾಕಿ, ಅವರನ್ನು ಲೂಟಿ ಮಾಡುವ ಯೋಜನೆ. ಐದು ಗ್ಯಾರಂಟಿಗಳ ಹೆಸರಿನಲ್ಲಿ ಈಗಾಗಲೇ ರಾಜ್ಯದ ಖಜಾನೆಯನ್ನು ಬರಿದು ಮಾಡಿರುವ ಕಾಂಗ್ರೆಸ್ ಸರ್ಕಾರ, ಈಗ ಖಾತೆ ಪರಿವರ್ತನೆ ಹೆಸರಿನಲ್ಲಿ ಹೊಸ ವಸೂಲಿಗೆ ಇಳಿದಿದೆ,” ಎಂದು ಆರೋಪಿಸಿದರು.
“ಸರ್ಕಾರವು ಶೇಕಡಾ 5ರಷ್ಟು ಹೆಚ್ಚುವರಿ ಶುಲ್ಕವನ್ನು ಜನರ ಮೇಲೆ ಹೇರುತ್ತಿದೆ. ಇದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ಹೊರೆಯಾಗಲಿದೆ. ನಾನು ಓಪನ್ನಾಗಿ ಹೇಳ್ತಿದ್ದೀನಿ, ದಯವಿಟ್ಟು ಯಾರೂ ಈ ಮೋಸದ ಬಲೆಗೆ ಬೀಳಬೇಡಿ, ದುಡ್ಡು ಕಟ್ಟಿ ಸಂಕಟಪಡಬೇಡಿ,” ಎಂದು ಜನರಲ್ಲಿ ಮನವಿ ಮಾಡಿದರು.
ಎರಡು ವರ್ಷ ಕಾಯಿರಿ, ನಾವೇ ಉಚಿತವಾಗಿ ಮಾಡಿಕೊಡುತ್ತೇವೆ
ರಾಜ್ಯದ ರಾಜಕೀಯ ಭವಿಷ್ಯದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ಅವರು, “ಇನ್ನು ಕೇವಲ ಎರಡು ವರ್ಷ ತಾಳ್ಮೆಯಿಂದ ಇರಿ. ರಾಜ್ಯದಲ್ಲಿ ಮತ್ತೆ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ. ನಾವು ಅಧಿಕಾರಕ್ಕೆ ಬಂದ ತಕ್ಷಣ ಯಾವುದೇ ಶುಲ್ಕವಿಲ್ಲದೆ, ಸಂಪೂರ್ಣ ಉಚಿತವಾಗಿ ಬಿ ಖಾತಾಗಳನ್ನು ಎ ಖಾತಾಗಳಿಗೆ ಪರಿವರ್ತನೆ ಮಾಡಿಕೊಡುತ್ತೇವೆ,” ಎಂದು ಘೋಷಿಸಿದರು.
ನಮ್ಮ ಕಾಲದ ಸಾಧನೆ ನೆನೆದ ಹೆಚ್‌ಡಿಕೆ
ಬಿ ಖಾತಾ ಸಮಸ್ಯೆಯ ಇತಿಹಾಸವನ್ನು ಕೆದಕಿದ ಅವರು, “ಈ ಸಮಸ್ಯೆ ಇಂದು ನಿನ್ನೆಯದಲ್ಲ, 1995ರಿಂದಲೂ ಇದೆ. 1997ರಲ್ಲಿ ಈ ಬಗ್ಗೆ ಮೊದಲ ಆದೇಶ ಹೊರಬಿದ್ದಿತ್ತು. ನಮ್ಮ ಆಡಳಿತಾವಧಿಯಲ್ಲಿ ನಗರಾಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡಿದ್ದೇವೆ. 7 ನಗರಸಭೆಗಳನ್ನು 9ಕ್ಕೆ, 68 ವಾರ್ಡ್‌ಗಳನ್ನು 98ಕ್ಕೆ ಏರಿಸಿದ್ದೆವು. ಬೆಂಗಳೂರಿನ ಸಮಗ್ರ ಅಭಿವೃದ್ಧಿಗಾಗಿ 110 ಹಳ್ಳಿಗಳನ್ನು ಬಿಬಿಎಂಪಿ ವ್ಯಾಪ್ತಿಗೆ ಸೇರಿಸಿದ್ದೆವು. ಕೇವಲ ಐದು ವರ್ಷಗಳಲ್ಲಿ ಸುಮಾರು 25 ಸಾವಿರ ಕೋಟಿ ರೂಪಾಯಿ ಅನುದಾನವನ್ನು ತಂದು ನಗರವನ್ನು ಅಭಿವೃದ್ಧಿಪಡಿಸಿದ್ದೆವು,” ಎಂದು ತಮ್ಮ ಸರ್ಕಾರದ ಸಾಧನೆಗಳನ್ನು ಸ್ಮರಿಸಿದರು.
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗೆ ಹೆಚ್‌ಡಿ ಕುಮಾರಸ್ವಾಮಿಯವರ ಈ ಹೇಳಿಕೆಯು ಹೊಸ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದ್ದು, ಆಸ್ತಿ ಮಾಲೀಕರಲ್ಲಿ ಗೊಂದಲ ಸೃಷ್ಟಿಸಿದೆ. ಸರ್ಕಾರದ ಈ ಯೋಜನೆಗೆ ಸಾರ್ವಜನಿಕರಿಂದ ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಲಿದೆ ಎಂಬುದನ್ನು ಕಾದುನೋಡಬೇಕಿದೆ.








