ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಯ ಕಾವು ಏರುತ್ತಿರುವ ಬೆನ್ನಲ್ಲೇ, ಇದೀಗ ಫೋನ್ ಕದ್ದಾಲಿಕೆ ಆರೋಪ ಆಡಳಿತ ಮತ್ತು ವಿಪಕ್ಷಗಳ ನಡುವಿನ ವಾಕ್ಸಮರಕ್ಕೆ ಹೊಸ ವೇದಿಕೆಯಾಗಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಡಿದ್ದ ಫೋನ್ ಟ್ಯಾಪಿಂಗ್ ಆರೋಪಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಪ್ರತಿಕ್ರಿಯೆಗೆ, ಕುಮಾರಸ್ವಾಮಿ ಅವರು ಈಗ ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಪ್ರಬಲವಾಗಿ ತಿರುಗೇಟು ನೀಡಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡರಂತೆ ಎನ್ನುವ ಗಾದೆಯ ಮೂಲಕ ಸಿಎಂ ವಿರುದ್ಧ ಹರಿಹಾಯ್ದಿರುವ ಕುಮಾರಸ್ವಾಮಿ, ಸರಣಿ ಪೋಸ್ಟ್ಗಳ ಮೂಲಕ ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕುಂಬಳಕಾಯಿ ಕಳ್ಳ ಎಂದರೆ ನಾನೇ ಎನ್ನುವ ಸ್ಥಿತಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನೀವು ಕೆಲಸ ಮಾಡುವುದನ್ನು ಬಿಟ್ಟು ಕೌಂಟರ್ ಕೊಡುವುದರಲ್ಲಿಯೇ ಹೆಚ್ಚು ಬ್ಯುಸಿಯಾಗಿದ್ದೀರಿ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ. ಕುಂಬಳಕಾಯಿ ಕಳ್ಳ ಎಂದರೆ ನಾನೇ.. ನಾನೇ.. ಎಂದು ಹೆಗಲು ಮುಟ್ಟಿ ನೋಡಿಕೊಂಡರೆ ನಾನೇನು ಮಾಡಲಿ? ಫೋನ್ ಕದ್ದಾಲಿಕೆ ಬಗ್ಗೆ ಮಾಧ್ಯಮಗಳಲ್ಲಿ ಬಂದ ವರದಿಗಳ ಆಧಾರದ ಮೇಲೆ ನಾನು ಮಾತನಾಡಿದ್ದೇನೆ ಅಷ್ಟೇ. ಆದರೆ ನಿಮ್ಮ ಪ್ರತಿಕ್ರಿಯೆ ನೋಡಿದರೆ ನಿಮಗೆ ಆಡಳಿತಕ್ಕಿಂತ ಹೆಚ್ಚಾಗಿ ಬೇರೆಯವರನ್ನು ಲೇವಡಿ ಮಾಡುವುದರಲ್ಲೇ ಹೆಚ್ಚು ಆಸಕ್ತಿ ಇದ್ದಂತಿದೆ ಎಂದು ಟೀಕಿಸಿದ್ದಾರೆ.
ಅಧಿಕಾರ ನಡೆಸುವುದನ್ನು ಬಿಟ್ಟು ಹಾದಿಬೀದಿಯಲ್ಲಿ ಕಚ್ಚಾಡುತ್ತಿದ್ದೀರಿ
ಜನರು ನಿಮಗೆ 140 ಸ್ಥಾನಗಳನ್ನು ನೀಡಿ ಅಧಿಕಾರ ಕೊಟ್ಟಿದ್ದಾರೆ. ಆದರೆ ಅದನ್ನು ಸಮರ್ಥವಾಗಿ ನಿಭಾಯಿಸುವ ಬದಲು ಅಡ್ನಾಡಿಗಳಂತೆ ಹಾದಿಬೀದಿಯಲ್ಲಿ ಕಚ್ಚಾಡುತ್ತಿದ್ದೀರಿ. ನಿಮ್ಮ ಪಕ್ಷದ ಆಂತರಿಕ ಕುರ್ಚಿ ಕಾಳಗದ ಮುಂದುವರಿದ ಭಾಗವೇ ಈ ಫೋನ್ ಕದ್ದಾಲಿಕೆ ಎಂಬುದು ಕೇವಲ ನನ್ನ ಮಾತಲ್ಲ, ಇದು ಮಾಧ್ಯಮಗಳು ಮತ್ತು ಜನರ ಸಂಶಯವಾಗಿದೆ. ಸತ್ಯಮೇವ ಜಯತೇ ಎಂಬುದು ನಿಮ್ಮ ಬರೀ ಘೋಷಣೆಯಾಗಿದೆ, ಆದರೆ ಸತ್ಯ ಹೇಳಲು ಏಕೆ ಹಿಂದೇಟು ಹಾಕುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ನನ್ನದು ಕದ್ದಾಲಿಸುವ ಕರ್ಮವಲ್ಲ
ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಅದು ಸ್ವತಂತ್ರ ಸರ್ಕಾರವಾಗಿರಲಿಲ್ಲ. ಕದ್ದಾಲಿಸುವ ಕರ್ಮ ನನಗೇಕೆ? ಸಿದ್ದವನದಲ್ಲಿ ಕುಳಿತು ಶಾಸಕರಿಗೆ ಬ್ರೈನ್ ವಾಶ್ ಮಾಡಿ ಸರ್ಕಾರ ಬೀಳಿಸುವ ಹೀನ ಜಾಯಮಾನ ನನ್ನದಲ್ಲ. ನಿಮ್ಮ ಮೊದಲ ಅವಧಿಯ ಸರ್ಕಾರ ಮತ್ತು ಈಗಿನ ಗುಪ್ತಚರ ಇಲಾಖೆಯ ಕಾರ್ಯವೈಖರಿ ರಾಜ್ಯದ ಜನರಿಗೆ ತಿಳಿದಿದೆ. ತುರ್ತು ಪರಿಸ್ಥಿತಿಯನ್ನು ಹೇರಿ ಪ್ರಜಾಪ್ರಭುತ್ವದ ಕುತ್ತಿಗೆ ಹಿಸುಕಿದ ಕಾಂಗ್ರೆಸ್ ಪಕ್ಷಕ್ಕೆ ಆಂತರಿಕ ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ.
ಅಗ್ರಿಮೆಂಟ್ ರಾಮಯ್ಯ ಎಂದು ವ್ಯಂಗ್ಯ
ಸಿಎಂ ಮತ್ತು ಡಿಸಿಎಂ ನಡುವಿನ ಸಂಬಂಧದ ಬಗ್ಗೆಯೂ ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ. ನಿಮ್ಮಿಬ್ಬರ ಕುಚುಕು ಕುಚುಕು ಗೆಳೆತನದ ಬಗ್ಗೆ ನಮಗೇನು ಸಂಕಟವಿಲ್ಲ. ಆದರೆ ನಿಮ್ಮಿಬ್ಬರ ಅಸಹನೆ ವೇದಿಕೆಗಳ ಮೇಲೆಯೇ ಸ್ಫೋಟಗೊಳ್ಳುತ್ತಿದೆ. ಎದುರಿಗೆ ನಗುವುದು, ಬೆನ್ನ ಹಿಂದೆ ಚೂರಿ ಹಾಕುವುದು ನಿಮ್ಮ ಜಾಯಮಾನ. ನಿಮ್ಮ ಸ್ನೇಹಿತನಿಗಾಗಿ ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಮಿಸ್ಟರ್ ಅಗ್ರಿಮೆಂಟ್ ರಾಮಯ್ಯ ಎಂದು ಸಿಎಂ ಸಿದ್ದರಾಮಯ್ಯನವರನ್ನು ಕುಮಾರಸ್ವಾಮಿ ನೇರವಾಗಿ ಕುಟುಕಿದ್ದಾರೆ.
ಎಸ್ಐಟಿ ಎಂದರೆ ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್
ರಾಜ್ಯದಲ್ಲಿನ ತನಿಖಾ ಸಂಸ್ಥೆಗಳ ದುರ್ಬಳಕೆ ಬಗ್ಗೆಯೂ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಮ್ (SIT) ಏನೇನು ಮಾಡುತ್ತಿದೆ ಎಂಬುದು ಜಗಜ್ಜಾಹೀರು. ಅಧಿಕಾರ ದುರ್ಬಳಕೆ ಮತ್ತು ದ್ವೇಷದ ರಾಜಕಾರಣ ನಿಮ್ಮ ನೈಜ ಗುಣ. ಪ್ರಧಾನಿ ಮೋದಿಯವರ ಹೆಸರನ್ನು ಅನಾವಶ್ಯಕವಾಗಿ ಎಳೆದು ತರುವ ಬದಲು ನಿಮ್ಮ ತಟ್ಟೆಯನ್ನು ಒಮ್ಮೆ ನೋಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ದೇವೇಗೌಡರ ತ್ಯಾಗ ನಿಮಗೆ ಮಾದರಿಯಾಗಲಿ
ನನ್ನ ಜತೆಗಿನ ಸಂಘರ್ಷಕ್ಕೆ ದೇವೇಗೌಡರನ್ನು ಎಳೆದು ತರುತ್ತೀರಿ. ದೇವೇಗೌಡರು ಪ್ರಧಾನಿ ಹುದ್ದೆಯನ್ನು ವಿರೋಚಿತವಾಗಿ ತ್ಯಜಿಸಿದರು. ವಾಜಪೇಯಿ ಅವರು ಬೆಂಬಲ ನೀಡುತ್ತೇವೆ ಎಂದರೂ ಅವರು ಅಧಿಕಾರಕ್ಕೆ ಅಂಟಿ ಕೂರಲಿಲ್ಲ. ಅವರ ಗರಡಿಯಲ್ಲಿ ಪಳಗಿದ ನೀವು ಅಂಥ ತ್ಯಾಗ ಮನೋಭಾವವನ್ನು ಒಮ್ಮೆ ಪ್ರದರ್ಶಿಸಿ. ಸೋತರೆ ಬಾಹುಬಲಿಯಂತೆ ಸೋಲಬೇಕು, ರಣಹೇಡಿಯಂತೆ ಪಲಾಯನ ಮಾಡಬಾರದು. ನಾನು ಸೋತಿದ್ದೇನೆ ಹೊರತು ಓಡಿ ಹೋಗಿಲ್ಲ ಎಂದು ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ.








