ಕುಮಾರಣ್ಣನ ಕನಸು ನುಂಗಿದ ಕೊರೊನಾಸುರ
ಜನರ ಬದುಕನ್ನು ಬರ್ಬಾದ್ ಮಾಡಿದ ಕೊರೊನಾ
ದೇವಾಲಯದಲ್ಲಿ ನಿಖಿಲ್ ಕುಮಾರಸ್ವಾಮಿ ಮದುವೆ
ಬೆಂಗಳೂರು: ಕೊರೊನಾ ವೈರಸ್ ಎಲ್ಲರ ಬದುಕನ್ನು ಬರ್ಬಾದ್ ಮಾಡಿಬಿಟ್ಟಿದೆ. ಎಲ್ಲೆಲ್ಲೂ ಕೊರೊನಾ ಭೀತಿಯಿಂದ ಜನರು ಹೈರಾಣಾಗುತ್ತಿದ್ದಾರೆ. ಈ ಮಧ್ಯೆ ಕೊರೊನಾಸುರ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಕನಸನ್ನು ನುಚ್ಚುನೂರು ಮಾಡಿಬಿಟ್ಟಿದೆ. ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮದುವೆಯನ್ನು ಅದ್ಧೂರಿಯಾಗಿ ಮಾಡಲು ಪ್ಲಾನ್ ಮಾಡಿಕೊಂಡಿದ್ದರು. ಆದರೆ ಕೊರೊನಾದಿಂದಾಗಿ ಈಗ ಹೆಚ್ ಡಿಕೆ ಅವರ ಪ್ಲಾನ್ ಉಲ್ಟಾ ಆಗಿದೆ.
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಕಲ್ಯಾಣ ಏಪ್ರಿಲ್ 17ರಂದು ನಿಶ್ಚಯವಾಗಿದೆ. ಫೆಬ್ರವರಿ 11 ರಂದು ತಾಜ್ ವೆಸ್ಟೆಂಡ್ ನಲ್ಲಿ ರೇವತಿ ನಿಖಿಲ್ ಎಂಗೇಜ್ ಮೆಂಟ್ ನಡೆದಿತ್ತು. ಏಪ್ರಿಲ್ 17 ರಂದು ರಾಮನಗರದಲ್ಲಿ ಅದ್ಧೂರಿ ವಿವಾಹ ನಡೆಸಲು ಸಿದ್ಧತೆ ನಡೆಸಲಾಗಿತ್ತು. ಕುಮಾರಸ್ವಾಮಿ ಮತ್ತು ಪತ್ನಿ ಅನಿತಾ ಕುಮಾರಸ್ವಾಮಿ ಕೂಡ ಮದುವೆ ಮಾಡಬೇಕೆಂದಿದ್ದ ಜಾಗವನ್ನು ನೋಡಿ, ಪೂಜೆಯನ್ನು ಕೂಡ ಮಾಡಿದ್ದರು. ವಾಸ್ತುಪ್ರಕಾರ ಕಲ್ಯಾಣ ಮಂಟಪದ ಅದ್ದೂರಿ ಸೆಟ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ಮಾಡಲಾಗಿತ್ತು.
ಆದರೆ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮದುವೆ ಪ್ಲಾನ್ ಚೇಂಜ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಿಡದಿಯಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಅಥವಾ ದೇವಾಲಯದಲ್ಲಿ ಕೇವಲ ತಮ್ಮ ಕುಟುಂಬ ವರ್ಗದ 50 ಮಂದಿ ಮಾತ್ರ ಸೇರಿ ವಿವಾಹ ಕಾರ್ಯ ನೆರವೇರಿಸಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.









