ಈ ಫಲಿತಾಂಶಕ್ಕೆ ಮಹತ್ವ ಕೊಡಲ್ಲ.. ನಮ್ಮ ಗುರಿ ಏನಿದ್ದರೂ 2023ರ ಚುನಾವಣೆ : ಹೆಚ್ ಡಿಕೆ
ಬೆಂಗಳೂರು : ಸ್ಥಳೀಯ ಕಾರ್ಯಕರ್ತರ ಒತ್ತಾಸೆಯ ಮೇರೆಗೆ ಹಾನಗಲ್ – ಸಿಂದಗಿ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ನಿಲ್ಲಿಸಲಾಯಿತು.
ಕಾಂಗ್ರೆಸ್-ಬಿಜೆಪಿ ಪಕ್ಷಗಳು ಹೇಳಿರುವಂತೆ ನಾನು ಉಪ ಚುನಾವಣೆ ಫಲಿತಾಂಶಕ್ಕೆ ಮಹತ್ವ ನೀಡುವುದಿಲ್ಲ.
ನಮ್ಮ ಗುರಿ ಏನಿದ್ದರೂ 2023ರ ಚುನಾವಣೆ ಮೇಲೆ ಕೇಂದ್ರೀಕೃತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇಂದು ಹಾನಗಲ್ – ಸಿಂದಗಿ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದ್ದು, ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಅತ್ಯಂತ ಹೀನಾಯವಾಗಿ ಸೋಲು ಅನುಭವಿಸಿದೆ.
ಈ ಬಗ್ಗೆ ಇಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಜೆಡಿಎಸ್ ಪಕ್ಷವು ಬಿಜೆಪಿ ಬಿ ಟೀಮ್ ಎಂದು ಕಾಂಗ್ರೆಸ್ ಪಕ್ಷದ ನಾಯಕರು ನಡೆಸಿದ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಉಪ ಚುನಾವಣೆ ಫಲಿತಾಂಶವೇ ಉತ್ತರವಾಗಿದೆ.
ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷವು ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಸ್ಪರ್ಧೆ ಮಾಡಿತ್ತು ಎಂದು ಹೇಳಿದ್ದ ಕಾಂಗ್ರೆಸ್ ಪಕ್ಷಕ್ಕೆ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳಲ್ಲಿ ಸಿಕ್ಕಿರುವ ಮತಗಳೇ ಉತ್ತರ ನೀಡಿವೆ ಎಂದು ಕುಟುಕಿದರು.
ಇನ್ನು ಉಪ ಚುನಾವಣೆಗಳು ನಡೆಯುವುದು ಹಣಬಲದಿಂದಲೇ ಎನ್ನುವುದು ಎಲ್ಲರೂ ಬಲ್ಲ ಸಂಗತಿ ಎಂದ ಕುಮಾರಸ್ವಾಮಿ, ಸಿಂದಗಿಯಲ್ಲಿ ಕೊನೆ ಆಟ ಎಂದಿದ್ದ ಸಚಿವರೊಬ್ಬರ ಹೇಳಿಕೆಯನ್ನು ಮಾಧ್ಯಮಗಳೇ ವರದಿ ಮಾಡಿವೆ.
ಹಾನಗಲ್ ಮತ್ತು ಸಿಂದಗಿ ಕ್ಷೇತ್ರದಲ್ಲಿ ಹಣದ ಹೊಳೆ ಹರಿದಿದೆ ಎನ್ನುವುದನ್ನು ಎಲ್ಲ ಮಾಧ್ಯಮಗಳೂ ವರದಿ ಮಾಡಿವೆ. ಬಿಜೆಪಿ-ಕಾಂಗ್ರೆಸ್ ಎರಡೂ ಪಕ್ಷಗಳು ಅಧಿಕಾರದಲ್ಲಿದ್ದಾಗ ಇದೇ ಆಗಿದೆ.
ಸಿದ್ದರಾಮಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ನಡೆದ ಗುಂಡ್ಲುಪೇಟೆ ಮತ್ತು ನಂಜನಗೂಡು ಉಪ ಚುನಾವಣೆಗಳ ಕಥೆ ಏನೂ ಎನ್ನುವುದು ತಿಳಿದ ವಿಷಯವೇ ಎಂದು ಖಾರವಾಗಿ ಮಾತನಾಡಿದರು.









