ಆತ ಪ್ರಪಂಚದಲ್ಲಿಯೇ ಅತ್ಯುತ್ತಮ ಬೌಲರ್ : ಆಕಾಶ್ ಚೋಪ್ರಾ
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಮೇಲೆ ಭಾರತ ತಂಡದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೊಗಳಿಕೆಯ ಸುರಿಮಳೆಗೈದಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಟೆಸ್ಟ್ ಆಡದಿದ್ದರೂ, ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಶಮಿ ಮಿಂಚುತ್ತಿದ್ದಾರೆ ಎಂದಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಶಮಿ ಉತ್ತಮವಾದ ಬೌಲಿಂಗ್ ಪ್ರದರ್ಶನ ನೀಡಿದ್ದಾರೆ.
ಮೂರನೇ ದಿನದಾಟದ ಭಾಗವಾಗಿ 16 ಓವರ್ ಗಳನ್ನು ಎಸೆದ ಶಮಿ 44 ರನ್ ಗಳನ್ನು ನೀಡಿ ಐದು ವಿಕೆಟ್ ಕಬಳಿಸಿದ್ದರು.
ಇದರೊಂದಿಗೆ ತಮ್ಮ ಟೆಸ್ಟ್ ಕ್ರಿಕೆಟ್ ಕೆರಿಯರ್ ನಲ್ಲಿ ಆರನೇ ಬಾರಿಗೆ ಐದು ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಇದಲ್ಲದೆ ಶಮಿ ಟೆಸ್ಟ್ ಕ್ರಿಕೆಟ್ ನಲ್ಲಿ 200 ವಿಕೆಟ್ ಪಡೆದ 11ನೇ ಬೌಲರ್ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಾರೆ. ಹೀಗಾಗಿ ಶಮಿ ಮೇಲೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ.
ಇದೀಗ ಶಮಿ ಅವರ ಪ್ರದರ್ಶನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಆಕಾಶ್ ಚೋಪ್ರಾ, ಬೌಲಿಂಗ್ ದಿಗ್ಗಜರಾದ, ಜೇಮ್ಸ್ ಆಂಡರ್ ಸನ್, ಸ್ಟೇನ್ ಗೆ ಶಮಿಯನ್ನು ಹೋಲಿಕೆ ಮಾಡಿದ್ದಾರೆ.
“ಮೊಹಮ್ಮದ್ ಶಮಿ ಬೌಲಿಂಗ್ ಆಕ್ಷನ್ ವಿಶ್ವದ ಅತ್ಯುತ್ತಮವಾಗಿದೆ. ಶಮಿ ಅತ್ಯುತ್ತಮ ಲೈನ್-ಲೆಂಥ್ ಬೌಲಿಂಗ್ ಮಾಡುತ್ತಾರೆ.
ನಾನು ಇಲ್ಲಿಯವರೆಗೆ ಸಾಕಷ್ಟು ಆಟಗಾರರನ್ನು ನೋಡಿದ್ದೇನೆ. ಆದರೆ ಶಮಿಯಂತೆ ಮಣಿಕಟ್ಟಿನ ಸ್ಥಾನ ಹೊಂದಿರುವ ಬೌಲರ್ ಅನ್ನು ನಾನು ನೋಡಿಲ್ಲ.
ಜೇಮ್ಸ್ ಆಂಡರ್ಸನ್ ಮತ್ತು ಸ್ಟೈನ್ ಅವರಂತಹ ಸ್ಟಾರ್ ಬೌಲರ್‌ಗಳು ತಮ್ಮ ಮಣಿಕಟ್ಟಿನ ಸ್ಥಾನವನ್ನು ಕಳೆದುಕೊಂಡು ರನ್ ಬಿಟ್ಟುಕೊಡುವುದನ್ನ ನಾವು ನೋಡಿದ್ದೇವೆ.
ಆದರೆ ಶಮಿ ಆ ರೀತಿ ಬೌಲಿಂಗ್ ಮಾಡುವುದನ್ನು ನಾನು ನೋಡಿಲ್ಲ ಎಂದು ಆಕಾಶ ಚೋಪ್ರಾ ಹೇಳಿದ್ದಾರೆ.
ಇನ್ನು ದಕ್ಷಿಣ ಆಫ್ರಿಕಾದ ಬೌಲರ್‌ಗಳ ಬಗ್ಗೆ ಚೋಪ್ರಾ ಮಾತನಾಡಿ, ಅವರು ದೀರ್ಘಕಾಲ ಟೆಸ್ಟ್ ಕ್ರಿಕೆಟ್ ಆಡಿಲ್ಲ.
ಲೈನ್ ಅಂಡ್ ಲೆಂಥ್ ನಲ್ಲಿ ಬೌಲಿಂಗ್ ಮಾಡಲು ಹೆಣಗಾಡುತ್ತಿದ್ದಾರೆ. ಟಿ20 ವಿಶ್ವಕಪ್ ಬಳಿಕ ಶಮಿ ಕೂಡ ಆಡಿರಲಿಲ್ಲ.
ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನು ಆಡಿದ್ದಾರೆ. ಆದರೆ ಅವರ ಬೌಲಿಂಗ್ ಬದಲಾಗಿಲ್ಲ ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.









