Helath Tips : ದತ್ತೂರಿಯ ಆಯುರ್ವೇದಿಕ್ ಮಹತ್ವ ಗೊತ್ತಾ…??
ದತ್ತೂರಿ ಗಿಡವು ಭಾರತದ ಎಲ್ಲಾ ಭಾಗಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ.
ಇದು ಬಂಗಾರಕ್ಕಿಂತ ಶ್ರೇಷ್ಠ.
ಈ ವನಸ್ಪತಿಯ ಪರಿಚಯವು ಚರಕ, ಸುಶ್ರುತ ಸಂಹಿತೆಗಳಲ್ಲಿ ಕಾಣಬಹುದು. ಹೊಳೆಬದಿಗಳಲ್ಲಿ ಕೊಳಕು ಪ್ರದೇಶಗಳಲ್ಲಿ ದತ್ತೂರಿ ಗಿಡವು ಬೆಳೆಯುತ್ತದೆ. ಅಸ್ತಮಾ, ನಾಯಿಕೆಮ್ಮು, ಸೆಳೆತ ರೋಗಗಳಿಗೆ ದತ್ತೂರಿ ಒಳ್ಳೆಯ ಮದ್ದು ಎಂದು ಹಲವು ವೈದ್ಯರು ಒಪ್ಪಿಕೊಂಡಿದ್ದಾರೆ. ಮನಸ್ಸನ್ನು ವಿಕೃತಗೊಳಿಸುವ ಶಕ್ತಿ ದತ್ತೂರಿ ಗಿಡದ ಬೀಜದಲ್ಲಿರುವುದರಿಂದ ವಶೀಕರಣದಂತಹ ಕೆಲಸಕ್ಕೆ ಇದರ ಬೀಜವನ್ನು ಹಿಂದಿನ ಕಾಲದಿಂದಲೂ ಬಳಸುತ್ತಿದ್ದರು.
ಗಾಯ, ನೋವು, ತುರಿಕೆ, ತ್ವಚೆಯ ರೋಗಗಳನ್ನು ನಿವಾರಿಸಿ ರ್ಮಕ್ಕೆ ಕಾಂತಿ ನೀಡುವ ದತ್ತೂರಿಯು ಆಯುರ್ವೇದದ ಪ್ರಮುಖದ್ರವ್ಯಗಳಲ್ಲೊಂದು.
ಇದಕ್ಕೆ ಕನ್ನಡದಲ್ಲಿ ಉಮ್ಮತ್ತಿ ಅಥವಾ ದತ್ತೂರಿ ಎಂದೂ, ತುಳುವಿನಲ್ಲಿ ಉಂಬೆದ ದೈ, ಸಂಸ್ಕೃತ ಮತ್ತು ಹಿಂದಿಯಲ್ಲಿ ದತ್ತೂರ ಎಂದೂ ಇಂಗ್ಲೀಷ್ ನಲ್ಲಿ ಥಾರ್ನ್ ಆಪಲ್ ಎಂದೂ ಕರೆಯುತ್ತಾರೆ. ಇದಕ್ಕಿರುವ ಇನ್ನಿತರ ಹೆಸರುಗಳೆಂದರೆ, ಕನಕ, ಮದನ, ಶಿವಪ್ರಿಯಾ, ಮಾತುಲ ಪುತ್ರಕ, ಉನ್ಮತ್ತ, ಕಾಂಚನಾ, ಹೇಮಾ, ಮಹಾಮೋಹಿ ಇತ್ಯಾದಿ.
ಈ ಗಿಡವು 6 ರಿಂದ 15 ಸೆಂಟಿಮೀಟರ್ ನಷ್ಟು ಉದ್ದದ ತ್ರಿಕೋನಾಕಾರದ ಎಲೆಗಳನ್ನು ಹೊಂದಿದ್ದು, 5 ರಿಂದ 15 ಸೆಂಟಿಮೀಟರ್ ನಷ್ಟು ಉದ್ದದ ಬಿಳಿ ನೇರಳೆ ಬಣ್ಣದ ಹೂಗಳನ್ನು ಹೊಂದಿರುತ್ತದೆ. ಕಾಯಿಗಳು ಚೆಂಡಿನಾಕಾರದಲ್ಲಿದ್ದು ಮುಳ್ಳಿನಿಂದ ಕೂಡಿರುತ್ತದೆ.
ಇದರಲ್ಲಿ ಎರಡು ಪ್ರಮುಖ ಪ್ರಬೇಧಗಳಿವೆ. ಅವು ಶ್ವೇತ ದತ್ತೂರ (ದತೂರ ಸ್ಟ್ರಾಮೋನಿಯಂ), ಬಿಳಿ ದತ್ತೂರ (ದತೂರ ಮೆಟಲ್). ಆದರೆ ಪುರಾತನ ವೈದ್ಯಶಾಸ್ತ್ರಜ್ಞರು ದತ್ತೂರಿ ಗಿಡದಲ್ಲಿ ಶ್ವೇತ ದತ್ತೂರ, ನೀಲದತ್ತೂರ, ಪೀತ ದತ್ತೂರ, ರಕ್ತದತ್ತೂರ, ಕೃಷ್ಣದತ್ತೂರ ಎಂಬುದಾಗಿ ಐದು ಪ್ರಬೇಧಗಳನ್ನು ಗುರುತಿಸಿದ್ದಾರೆ. ದತ್ತೂರಿ ಗಿಡದ ಬೇರು, ಕಾಯಿ, ಬೀಜ, ಹೂವು, ಎಲೆ ಔಷಧೀಯ ಉಪಯೋಗವನ್ನು ಹೊಂದಿವೆ. ದತ್ತೂರದಿಂದ ತಯಾರಿಸಿದ ತೈಲವನ್ನು ನೋವಿನ ಸ್ಥಳಕ್ಕೆ ಹಚ್ಚಿ ಮೃದುವಾಗಿ ಉಜ್ಜಿ, ಶಾಖ ಕೊಡುವುದರಿಂದ ಸಂಧಿವಾತ, ಉಳುಕಿನ ನೋವು ಮತ್ತು ವಾತವ್ಯಾಧಿಗಳಲ್ಲಿ ಕಾಣುವ ಸಂಧಿ ಶೂಲಗಳು ಕಡಿಮೆಯಾಗುವುವು.